ಮಂಗಳೂರು : ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿಜಿ ಯಕ್ಷ ಫೌಂಡೇಶನ್ ಆಯೋಜಿಸಿದ್ದ ‘ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಮತ್ತು ಯಕ್ಷನಾದೋತ್ಸವ’ ಕಾರ್ಯಕ್ರಮ ದಿನಾಂಕ 19-11-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ ಮಾತನಾಡಿ “ಕಲಾವಿದನಿಗೆ ಚಾರಿತ್ರ್ಯ ಮುಖ್ಯ. ಚಾರಿತ್ರ್ಯದ ಪಾವಿತ್ರ್ಯ ಉಳಿಸುವುದು ಕಲಾವಿದರ ಜವಾಬ್ದಾರಿ” ಎಂದು ಹೇಳಿದರು. ಆಶೀರ್ವಚನ ನೀಡಿದ ಕುಡುಪು ನರಸಿಂಹ ತಂತ್ರಿ, “ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿರುವ ಹರಿನಾರಾಯಣ, ಲೀಲಾವತಿ ಬೈಪಾಡಿತ್ತಾಯ ದಂಪತಿ ಅದೆಷ್ಟೋ ಶಿಷ್ಯರನ್ನು ರೂಪಿಸಿದ್ದಾರೆ. ಅವರಿಂದ ವಿದ್ಯೆ ಕಲಿತವರು ಪ್ರಸಿದ್ದಿ ಪಡೆಯುತ್ತಿದ್ದಾರೆ” ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಪಂಚಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಶುಭ ಹಾರೈಸಿದರು. ಹಿರಿಯ ಮದ್ದಳೆಗಾರ ಮಿಜಾರು ಶ್ರೀ ಮೋಹನ ಶೆಟ್ಟಿಗಾರ್ ಅವರಿಗೆ ನಗದು ರೂ.10,000/- ಒಳಗೊಂಡ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ 2023’ ಪ್ರದಾನ ಮಾಡಲಾಯಿತು. ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಹಿಮ್ಮೇಳ ಕಲಾವಿದ ಚಂದ್ರಶೇಖರ್ ಭಟ್ ಕೊಂಕಣಾಜೆ ಅಭಿನಂದನಾ ಭಾಷಣ ಮಾಡಿದರು.
ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -2023 ಪುರಸ್ಕೃತರಾದ ತೆಂಕುತಿಟ್ಟಿನ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರನ್ನು ಶಿಷ್ಯರು ಸನ್ಮಾನಿಸಿದರು. ಆನಂದ ಗುಡಿಗಾರ್ ಪ್ರಶಸ್ತಿ ಪತ್ರ ವಾಚಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು. ಶ್ರವಣ್ ಉಡುಪ ಕತ್ತಲ್‌ಸಾರ್ ವಂದಿಸಿದರು.
ಬೈಪಾಡಿತ್ತಾಯ ಶಿಷ್ಯ ವೃಂದದಿಂದ 10 ಚೆಂಡೆಗಳ ಅಬ್ಬರತಾಳದ ಯಕ್ಷನಾದೋತ್ಸವ ಜರುಗಿತು. ಶಾಲಿನಿ ಹೆಬ್ಬಾರ್ ಭಾಗವತಿಕೆಯಲ್ಲಿ, ಚಂದ್ರಶೇಖರ ಕೊಂಕಣಾಜೆ, ಆನಂದ ಗುಡಿಗಾರ, ಸೋಮಶೇಖರ ಭಟ್, ಕುಡುಪು ಪದ್ಮರಾಜ ತಂತ್ರಿ ಅವರು ಹಿಮ್ಮೇಳ ವಾದನದಲ್ಲಿ ಹಿರಿಯ ಕಲಾವಿದರಾದ ಎಂ.ಎಲ್.ಸಾಮಗ, ಗಣರಾಜ ಕುಂಬ್ಳೆ ಮತ್ತು ಅನಂತ ಬೈಪಾಡಿತ್ತಾಯ ಅವರ ಮುಮ್ಮೇಳದಲ್ಲಿ ‘ಶ್ರೀರಾಮ ದರ್ಶನ (ಜಾಂಬವತಿ ಕಲ್ಯಾಣ)’ ತಾಳಮದ್ದಲೆ ಗಮನ ಸೆಳೆಯಿತು. ಸಭಾ ಕಾರ್ಯಕ್ರಮದ ಬಳಿಕ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ, ತಲಕಳ ಇದರ ಮಕ್ಕಳು, ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಿರ್ದೇಶನದಲ್ಲಿ ಪೂರ್ವರಂಗದ ಪೀಠಿಕಾ ಸ್ತ್ರೀವೇಷ ಹಾಗೂ ಪರಂಪರೆಯ ರಂಗ ನಡೆಗಳುಳ್ಳ ‘ಕರ್ಣಾರ್ಜುನ ಕಾಳಗ’ ಯಕ್ಷಗಾನವನ್ನು ಪ್ರಸ್ತುತಪಡಿಸಿದರು.