ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಸಮಿತಿ ಹಾಗೂ ಕರ್ನಾಟಕ ಗಮಕ ಕಲಾ ಪರಿಷದ್ ಇದರ ಕಾರ್ಕಳ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಹರಿಶ್ಚಂದ್ರ ಕಾವ್ಯದ ವಾಚನ ವ್ಯಾಖ್ಯಾನವು ದಿನಾಂಕ 31-08-2023ರಂದು ಕಾರ್ಕಳ ಸರಕಾರಿ ಪ.ಪೂ.ಕಾಲೇಜಿನಲ್ಲಿ ನಡೆಯಿತು.
“ರಾಘವಾಂಕ ಕವಿ ವಿರಚಿತ ಹರಿಶ್ಚಂದ್ರ ಕಾವ್ಯದ ವಿಶ್ವೇಶ್ವರ ಸಾಕ್ಷಾತ್ಕಾರ” ಎಂಬ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಅವರು ವ್ಯಾಖ್ಯಾನಕಾರರಾಗಿ ಹರಿಶ್ಚಂದ್ರ ಕಾವ್ಯದ ಮಹತ್ವವನ್ನು ಹೇಳಿ ಕಾವ್ಯದ ವ್ಯಾಖ್ಯಾನವನ್ನು ನೆರವೇರಿಸಿದರು. ಗಮಕಿ ವಿದ್ವಾನ್ ಸುರೇಶ್ ರಾವ್ ಅತ್ತೂರು ಅವರು ಕಾವ್ಯದ ವಾಚನಕಾರರಾಗಿ ಭಾಗವಹಿಸಿದ್ದರು.
“ಹರನೆಂಬುದೇ ಸತ್ಯ. ಸತ್ಯವೆಂಬುದೇ ಹರ. ಅದನ್ನುಳಿದು ಅನ್ಯವಿಲ್ಲ. ದೇವರೊಬ್ಬನೇ ಎಂಬ ಸಂದೇಶವನ್ನು ಸಾರುವ ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯವು ಹನ್ನೆರಡನೇ ಶತಮಾನದ ಶ್ರೇಷ್ಠ ಕಾವ್ಯಗಳಲ್ಲಿ ಒಂದಾಗಿದೆ” ಎಂಬುದಾಗಿ ಹಿರಿಯ ವ್ಯಾಖ್ಯಾನಕಾರರಾದ ಗಮಕಿ ವಿದ್ವಾನ್ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಬೆಂಗಳೂರು ಇವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಡಾ.ನಾ.ಮೊಗಸಾಲೆ, ಗಮಕ ಕಲಾ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್ ಕೆಮ್ಮಣ್ಣು, ಕಾರ್ಕಳ ತಾಲೂಕು ಅಧ್ಯಕ್ಷರಾದ ಮಾಧವ ಭಟ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಗೌರವಾಧ್ಯಕ್ಷರಾದ ಎಸ್.ನಿತ್ಯಾನಂದ ಪೈ, ಅಧ್ಯಕ್ಷರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಾಶಿವ ಕಾಮತ್ ಪ್ರಾರ್ಥಿಸಿ ವೀಣಾ ರಾಜೇಶ್ ಗಮಕಿಗಳನ್ನು ಪರಿಚಯಿಸಿದರು. ಗಮಕ ಕಲಾ ಪರಿಷತ್ ಕಾರ್ಕಳ ಸಮಿತಿಯ ಕಾರ್ಯದರ್ಶಿಗಳಾದ ಗಣಪಯ್ಯ ಭಟ್ ನಿರೂಪಿಸಿದರು. ಮಾಧವ ಭಟ್ ಸ್ವಾಗತಿಸಿ ಸದಾನಂದ ನಾರಾವಿ ವಂದಿಸಿದರು.
