ಮಂಗಳೂರು : ಹವ್ಯಾಸಿ ಬಳಗ ಕದ್ರಿ ಮಂಗಳೂರು ಸಂಸ್ಥೆಯ 30ನೇ ವರ್ಷಾಚರಣೆ ‘ತ್ರಿಂಶತಿ ಸಂಭ್ರಮ’ ಕಾರ್ಯಕ್ರಮ ದಿನಾಂಕ 05 ಜನವರಿ 2025ರ ಭಾನುವಾರದಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಯಕ್ಷಗಾನ ಉಳಿದು ಬೆಳೆಯಲು ಮುಖ್ಯ ಕಾರಣವೇ ಯಕ್ಷ ಸಂಘಟನೆಗಳು ಮತ್ತು ಸಂಘಟಕರು. ಹವ್ಯಾಸಿ ಬಳಗ ಕದ್ರಿ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ಕೀರ್ತಿಶೇಷ ಕಲಾವಿದರನ್ನು ನೆನಪು ಮಾಡುವುದು ಮತ್ತು ನೇಪಥ್ಯಕ್ಕೆ ಸರಿದ ಕಲಾವಿದರನ್ನು ಗುರುತಿಸುವ ಕಾರ್ಯ ಅಭಿನಂದನೀಯ. ಯಕ್ಷಗಾನ ಎಲ್ಲ ಭಾಷಿಗರನ್ನು ಹಾಗೂ ಎಲ್ಲಾ ಸಂಸ್ಕೃತಿಯವರನ್ನು ಸೆಳೆಯುವ ಕಲೆ. ನೃತ್ಯ, ವೇಷ-ಭೂಷಣ, ಸಂಗೀತ ಆಕರ್ಷಣೀಯವಾಗಿದ್ದು ಸಮಷ್ಟಿಯ ಕಲೆಯಾದ ಕಾರಣ ಎಲ್ಲ ಭಾಷಿಗರೂ ನೋಡಿ ಆನಂದಿಸುತ್ತಾರೆ. ಕನ್ನಡ, ತುಳು, ಮಲಯಾಳ, ಇಂಗ್ಲಿಷ್ ಹಿಂದಿ ಸಹಿತ ಹಲವು ಭಾಷೆಗಳಲ್ಲಿ ಯಕ್ಷಗಾನ ಪ್ರಸ್ತುತಗೊಳ್ಳುತ್ತಿದೆ. ಈ ಶ್ರೀಮಂತ ಕಲೆ ನಮ್ಮ ಕರಾವಳಿಯಲ್ಲಿ ಹುಟ್ಟಿ ಬೆಳೆದು ದೇಶ ಮತ್ತು ದೇಶದ ಹೊರಗೆ ಬೆಳಕು ಚೆಲ್ಲುತ್ತಿರುವುದು ಹೆಮ್ಮೆಯ ವಿಚಾರ.” ಎಂದರು.
ಪೊಲ್ಯ ಉಮೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ವಾಸ್ತುತಜ್ಞ ರಾಜಕುಮಾರ್ ಕುಲಶೇಖರ ಉದ್ಘಾಟಿಸಿದರು. ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಮನೋಜ್ ಕುಮಾರ್, ವೇದಮೂರ್ತಿ ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣ, ಪ್ರಮಖರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ರೇಕಿ ಮಾಸ್ಟರ್ ವಿಜಯ್ ಸುವರ್ಣ, ಡಾ. ವಸಂತ ಕುಮಾರ್ ಶೆಟ್ಟಿ, ಭುಜಬಲಿ ಧರ್ಮಸ್ಥಳ, ನಂದನ್ ಮಲ್ಯ, ಶಶಿಧರ್ ಕಾರಂತ್, ಸೌಂದರ್ಯ ರಮೇಶ್, ನಿತಿನ್ ಅತ್ತಾವರ, ಮೋಹನ್ ಕೊಪ್ಪಳ, ಭಾಸ್ಕರ ರೈ ಕುಕ್ಕುವಳ್ಳಿ ಮನೋಹರ ಶೆಟ್ಟಿ ಕದ್ರಿ, ಕೃಷ್ಣರಾಜ ಆಚಾರ್ಯ ಕದ್ರಿ, ನಿರ್ಮಲಾ. ಎಸ್. ಶೆಟ್ಟಿ, ಹವ್ಯಾಸಿ ಬಳಗ ಕದ್ರಿ ಇದರ ಸಂಚಾಲಕರಾದ ಶರತ್ ಕುಮಾರ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.