ಕುಂದಾಪುರ: ಗೊಂಬೆಯಾಟದ ಉಳಿವಿಗಾಗಿ ಶ್ರಮಿಸುತ್ತಿರುವ ಉಪ್ಪಿನಕುದ್ರು ‘ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ’ಯ ನೇತಾರ ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಇವರು ಹೆರಿಟೇಜ್, ಮ್ಯೂಜಿಯಂ ಮತ್ತು ಡಾಕ್ಯೂಮೆಂಟೇಶನ್ ಸೆಂಟರ್ಸ್ ಕಮಿಷನ್ ಆಫ್ ಯುನಿಮಾ ಇಂಟರ್ನ್ಯಾಷನಲ್ ಇದರಿಂದ ಕೊಡಮಾಡುವ “ಹೆರಿಟೇಜ್ ಪ್ರಶಸ್ತಿ 2024’ಕ್ಕೆ ಭಾಜನರಾಗಿದ್ದಾರೆ. ಕರಾವಳಿ ಜಾನಪದ ರಂಗ ಕಲೆಗಳಲ್ಲಿ ಉಪ್ಪಿನಕುದ್ರು ಯಕ್ಷಗಾನ ಸೂತ್ರದ ಗೊಂಬೆಯಾಟ ಕಲೆ ಅತೀ ವಿಶೇಷ ಹಾಗೂ ವಿಶಿಷ್ಟವಾದದ್ದು. 350 ವರ್ಷದ ಹಿಂದೆ ಪ್ರಾರಂಭಗೊಂಡು ಇಂದಿಗೆ 6ನೇ ತಲೆಮಾರಿನಲ್ಲಿ ನಡೆಯುತ್ತಿರುವ ಈ ಕಲೆ ಭಾಸ್ಕರ ಕಾಮತ್ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ.
ಸರಕಾರದ ಯಾವುದೇ ಧನಸಹಾಯ ನಿರೀಕ್ಷಿಸದೇ ಮುಂದುವರಿಯುತ್ತಿರುವ ಈ ಜಾನಪದ ಕಲೆ ಅನೇಕ ಮಹತ್ತರ ಕಾರ್ಯಗಳನ್ನು ಮಾಡುವ ಮೂಲಕ ಕಲಾಸಕ್ತರ ಗಮನ ಸೆಳೆದಿದೆ. ಉಪ್ಪಿನಕುದ್ರು ಗ್ರಾಮದಲ್ಲಿ “ಗೊಂಬೆಯಾಟ ಅಕಾಡೆಮಿ” ಚಿಂತನೆಯಡಿ ನಿರಂತರವಾಗಿ ತನ್ನ ಸೇವೆಯನ್ನು ನೀಡುತ್ತಾ ಬಂದಿರುವ ಸಂಸ್ಥೆಯು ಗೊಂಬೆಯಾಟ ಹೊರತುಪಡಿಸಿ ವಿವಿಧ ಕಲೆಗಳಿಗೂ ವೇದಿಕೆಯಾಗಿದ್ದು ಅದರ 100ನೇ ತಿಂಗಳ ಕಾರ್ಯಕ್ರಮದ ಹೊತ್ತಿನಲ್ಲಿಯೇ ಭಾಸ್ಕರ್ ಕಾಮತ್ ಅವರಿಗೆ ಹೆರಿಟೇಜ್ ಪ್ರಶಸ್ತಿ ದೊರೆತಿದೆ. ಹೆರಿಟೇಜ್ ಪ್ರಶಸ್ತಿ ಪ್ರದಾನ ಸಮಾರಂಭವು ಸೌತ್ ಕೊರಿಯಾದಲ್ಲಿ ನಡೆಯಲಿದೆ.