ಮೂಡುಬಿದಿರೆ : ವಿದ್ಯಾಗಿರಿಯ ‘ಕುವೆಂಪು ಸಭಾಂಗಣ’ದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗ ಮತ್ತು ಕೆ.ಎನ್. ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ ಸಮಿತಿ ಏರ್ಪಡಿಸಿದ ‘ಹಿಂದಿ ದಿವಸ್’ ಕಾರ್ಯಕ್ರಮವು ದಿನಾಂಕ 14-09-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆಯವರು ಕೆ.ಎನ್. ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ “ಬದುಕಿನುದ್ದಕ್ಕೂ ಕಷ್ಟ ಪರಂಪರೆಗಳನ್ನೇ ಎದುರಿಸಿದ ಶಿಕ್ಷಕರಾಗಿದ್ದ ಕೆ.ಎನ್. ಭಟ್ ಶಿರಾಡಿಪಾಲ್ 38 ಕೃತಿಗಳ ರಚನೆ ಮಾಡಿದ್ದಾರೆ. ಅವರ ಅನೇಕ ಲೇಖನಗಳು ಆ ಕಾಲದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರವೀಂದ್ರನಾಥ ಠಾಗೋರರ ‘ಸಾಧನಾ’ ಕೃತಿಯನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯ ಮತ್ತು ಗದ್ಯ ಎರಡೂ ಪ್ರಕಾರಗಳಲ್ಲಿ ನಿರಂತರ ಬರೆದ ಶಿರಾಡಿಪಾಲ್ ಅವರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಗೊಳ್ಳಬೇಕು” ಎಂದು ಹೇಳಿದರು.
ಸಮಾರಂಭದಲ್ಲಿ ಪಾಲಡ್ಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಆಂಡ್ಯ್ಯೂ ಡಿ’ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಹಿಂದಿ ದಿವಸ್’ನ ಮಹತ್ತ್ವವನ್ನು ವಿವರಿಸಿದರು. ಶತನಮನ ಶತಸನ್ಮಾನ ಗೌರವ ಸಲಹೆಗಾರ ಶ್ರೀಪತಿ ಭಟ್ ಮೂಡುಬಿದಿರೆ ಮಾತನಾಡಿ “ವೃತ್ತಿ ಯಾವುದಾದರೂ ಅದನ್ನು ಗೌರವದಿಂದ ಕಾಣಬೇಕು. ಜ್ಞಾನದ ಆಸಕ್ತಿಯಿದ್ದರೆ ಎಲ್ಲರೂ ಸಾಧಕರಾಗಬಹುದು. ಅಡುಗೆ ಭಟ್ಟರಾಗಿದ್ದ, ಬಸ್ ಏಜೆಂಟ್ ಆಗಿದ್ದ ಶಿರಾಡಿಪಾಲ್ ಅವರು ಮೂರನೇ ಕ್ಲಾಸಲ್ಲೇ ಶಾಲೆ ಬಿಟ್ಟರೂ ಮುಂದೆ ಸ್ವಅಧ್ಯಯನದ ಮೂಲಕ ಶಿಕ್ಷಕರಾಗಿ ಸಾಹಿತಿಯಾಗಿ ಬೆಳೆದದ್ದೇ ಇದಕ್ಕೆ ಉದಾಹರಣೆ” ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುರಿಯನ್ ಮಾತನಾಡಿ “ಜ್ಞಾನ ಸಾಧನೆಗಿಂತ ಹಿರಿದಾದ ಸಂಪತ್ತು ಯಾವುದೂ ಇಲ್ಲ. ವಿದ್ಯಾರ್ಥಿಗಳು ತಮ್ಮ ಸುತ್ತುಮುತ್ತ ಇರುವ ಹಿರಿಯರ ಸಾಧಕರ ಬದುಕಿನಿಂದ ಸ್ಪೂರ್ತಿಗೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು” ಎಂದರು.
ಸನ್ಮಾನ ಸಮಿತಿ ಸಂಘಟಕ ಪತ್ರಕರ್ತ ಕೃಷ್ಣಕುಮಾರ್ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿ ಸ್ವಾಗತಿಸಿದರು. ಸಮಾರಂಭದಲ್ಲಿ ಸನ್ಮಾನ ಸಮಿತಿ ಸದಸ್ಯ ಪತ್ರಕರ್ತ ಹರೀಶ್ ಕೆ. ಆದೂರು, ಕೆ.ಎನ್. ಭಟ್ ಶಿರಾಡಿಪಾಲ್ ಅವರ ಶಿಷ್ಯ ಜಯರಾಜ್ ಕಂಬಳಿ, ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ರಾಜೀವ್ ಸಿ. ಉಪಸ್ಥಿತರಿದ್ದರು.