ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿಗಳ ಸಹಭಾಗಿತ್ವದಲ್ಲಿ ಸುರತ್ಕಲ್ ಮೇಲುಸೇತುವೆಯ ತಳಭಾಗದಲ್ಲಿಯ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕತಿಕ ವೇದಿಕೆಯಲ್ಲಿ ಉದಯರಾಗ ಸರಣಿ ಕಾರ್ಯಕ್ರಮದ ‘ಉದಯರಾಗ 61’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 06 ಏಪ್ರಿಲ್ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಏಷ್ಯನ್ ಪೇಂಟ್ಸ್ ನ ನಿವೃತ್ತ ಅಧಿಕಾರಿ ಹಾಗೂ ತರಬೇತುದಾರ ಎ.ಕೆ. ಅಯ್ಯ “ನಮ್ಮ ರಾಷ್ಟ್ರದ ಸಂಸ್ಕೃತಿಯ ಪ್ರತೀಕವಾಗಿರುವ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳ ಕುರಿತು ಬದ್ಧತೆ ಹಾಗೂ ಆಸಕ್ತಿ ಅಗತ್ಯ. ಬದುಕಿನ ಚೆಲುವಿಗೆ ಮತ್ತು ನೆಮ್ಮದಿಗೆ ಸಂಗೀತ ಸಹಾಯಕವಾಗಿದ್ದು, ಯುವ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಿದೆ. ಸಂಘಟಿತ ಪ್ರಯತ್ನದ ಮೂಲಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಿ ಪ್ರತಿಭಾ ಪ್ರದರ್ಶನದ ಅವಕಾಶ ನೀಡಬೇಕು” ಎಂದು ನುಡಿದರು.
ಯುವ ಕಲಾವಿದ ಆತ್ರೇಯ ಗಂಗಾಧರ ಹೊಸಬೆಟ್ಟು ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಹೇಮಂತ್ ಭಾಗವತ್ ಮೂಲ್ಕಿ ಹಾರ್ಮೋನಿಯಂ ನಲ್ಲಿ ಪ್ರಥಮ್ ಆಚಾರ್ಯ ಸುರತ್ಕಲ್ ತಬಲಾದಲ್ಲಿ, ಸುಜಾತಾ ಎಸ್. ಭಟ್ ತಾನ್ ಪುರದಲ್ಲಿ ಹಾಗೂ ರಮನಾಥ ಕಿಣಿ ತಾಳದಲ್ಲಿ ಸಹಕರಿಸಿದರು. ಕೃಷ್ಣಮೂರ್ತಿ ಚಿತ್ರಾಪುರ ಸ್ವಾಗತಿಸಿ, ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಪೇಜಾವರ ವಂದಿಸಿದರು. ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ. ರಾಜ್ ಮೋಹನ್ ರಾವ್, ಸಂಯೋಜಕ ಸತೀಶ್ ಸದಾನಂದ್, ಗಂಗಾಧರ ಹೊಸಬೆಟ್ಟು ಉಪಸ್ಥಿತರಿದ್ದರು.