ಮಂಗಳೂರು : ಮಂಗಳೂರಿನ ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ನಡೆದ ‘ಗಾನಯೋಗಿ ಪಂಚಾಕ್ಷರಿ -ಪುಟ್ಟರಾಜ ಗವಾಯಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ’ ಕಾರ್ಯಕ್ರಮವು ದಿನಾಂಕ 16 ಫೆಬ್ರವರಿ 2025 ರಂದು ಮಂಗಳೂರಿನ ವಿ. ಟಿ. ರಸ್ತೆಯಲ್ಲಿರುವ ಕೃಷ್ಣ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ-ಕಲಾವಿದರಾಗಿ ಭಾಗವಹಿಸಿದ ಮೈಸೂರಿನ ಪಂಡಿತ್ ವೀರಭದ್ರಯ್ಯ ಹಿರೇಮಠ ಮಾತನಾಡಿ “ಗದುಗಿನ ವೀರೇಶ್ವರ ಪುಣ್ಯಾಶ್ರಮದ ವಾತಾವರಣದಲ್ಲಿ ಬೆಳೆದ ಸಂಗೀತ ಪರಂಪರೆ ಅಪಾರ. ಇಂತಹ ಗುರುಶಿಷ್ಯ ಪರಂಪರೆಯಿಂದಲೇ ಸಂಗೀತ ವಿದ್ಯೆಯು ವಿದ್ಯಾರ್ಥಿಗೆ ಸಿದ್ಧಿಸುವುದು. ಇಂದಿನ ಅನೇಕ ಕಲಾವಿದರಿಗೆ ಪಂಚಾಕ್ಷರಿ- ಪುಟ್ಟರಾಜ ಗವಾಯಿಗಳ ಸಂಬಂಧದಿಂದಲೇ ಸಂಗೀತವು ಶುದ್ಧ ರೀತಿಯಲ್ಲಿ ಉಳಿದು ಮುಂದುವರಿದಿದೆ” ಎಂದರು.
ಮೈಸೂರಿನ ಸಮೀರ್ ರಾವ್ ಇವರಿಂದ ಬಾನ್ಸುರಿ ವಾದನ, ಭೀಮಾಶಂಕರ್ ಬಿದನೂರ್ ಹಾಗೂ ಪಂಚಮಿ ಬಿದನೂರ್ ಇವರಿಂದ ತಬಲ ಸೋಲೋ ಹಾಗೂ ಪಂಡಿತ್ ವೀರಭದ್ರಯ್ಯ ಹಿರೇಮಠ ಇವರಿಂದ ಹಿಂದುಸ್ತಾನಿ ಗಾಯನ ಕಚೇರಿ ನಡೆಯಿತು ಇವರಿಗೆ ಹಾರ್ಮೋನಿಯಂನಲ್ಲಿ ಶ್ರೀರಾಮ ಭಟ್ ಮತ್ತು ತಬಲಾದಲ್ಲಿ ಬೆಂಗಳೂರಿನ ಆದರ್ಶ್ ಶೆಣೈ ಸಹಕರಿಸಿದರು. ಟ್ರಸ್ಟಿನ ಅಧ್ಯಕ್ಷರಾದ ಲೋಲಾಕ್ಷಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೇಮನಾಥ್ ಆಚಾರ್ಯ ನಿರ್ವಹಿಸಿ, ಸಂದೇಶ್ ಕಾಮತ್ ವಂದಿಸಿದರು.