ಹುಬ್ಬಳ್ಳಿ : ಹುಬ್ಬಳ್ಳಿಯ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರ, ಪ್ರಸಕ್ತ ಕಾಲಘಟ್ಟದ ಖ್ಯಾತ ಸಂಗೀತ ಗುರು ಪಂಡಿತ್ ಅಶೋಕ ಹುಗ್ಗಣ್ಣವರ (64) ಇನ್ನಿಲ್ಲ. ಅವರು ದಿನಾಂಕ 24 ಡಿಸೆಂಬರ್ 2025ರಂದು ತಡರಾತ್ರಿ ದಾವಣಗೆರೆಯಲ್ಲಿ ನಿಧನರಾದರು. ಪಾರ್ಥಿವ ಶರೀರವನ್ನು ಗುರುವಾರ ನಸುಕಿನಲ್ಲಿ ಹುಬ್ಬಳ್ಳಿ ಲಿಂಗರಾಜನಗರ ಬಡಾವಣೆಯ ಅವರ ಸ್ವಗೃಹ ‘ಬನಶ್ರೀ’ಗೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯ ವಿದ್ಯಾನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಉಪನ್ಯಾಸಕಿಯಾಗಿರುವ ಪತ್ನಿ ವೀಣಾ, ವಿಜ್ಞಾನಿ ಹಾಗೂ ಗಾಯಕರಾಗಿರುವ ವಿನಾಯಕ್ ಸೇರಿದಂತೆ ಅಪಾರ ಬಂಧು ಬಾಂಧವರು ಮತ್ತು ಶಾಸ್ತ್ರೀಯ ಸಂಗೀತ ಲೋಕದ ಅಸಂಖ್ಯ ಕಲಾಬಳಗವನ್ನು ಅವರು ಅಗಲಿದ್ದಾರೆ. ಗ್ವಾಲಿಯರ್ ಘರಾಣೆಯ ಕಲಾವಿದರಾಗಿದ್ದ ಅವರು ಪಂಡಿತ್ ಲಿಂಗರಾಜ ಬುವಾ ಯರಗುಪ್ಪಿ ಶಿಷ್ಯರು. ಶೈಕ್ಷಣಿಕವಾಗಿ ಪ್ರತಿಭಾಶಾಲಿಯಾಗಿದ್ದ ಅಶೋಕ ಹುಗ್ಗಣ್ಣವರ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಾರಂಭದಲ್ಲಿ ಎಂ.ಎಸ್ಸಿ ಪಡೆದರು. ಆ ನಂತರ ಶಾಸ್ತ್ರೀಯ ಸಂಗೀತದೆಡೆಗಿನ ತೀವ್ರ ತುಡಿತದಿಂದಾಗಿ ಸಂಗೀತ ಶಾಸ್ತ್ರ ಎಂ.ಎ. ವ್ಯಾಸಂಗ ಮಾಡಿ, ಹೊನ್ನಾವರ ಎಸ್.ಡಿ.ಎಂ. ಕಾಲೇಜಿನ ಸಂಗೀತ ವಿಭಾಗವನ್ನು ಎರಡೂವರೆ ದಶಕಗಳ ಕಾಲ ಶ್ರೀಮಂತಗೊಳಿಸಿದ್ದರು. 2021ರಲ್ಲಿ ನಿವೃತ್ತರಾದ ಮೇಲೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಹುಗ್ಗಣ್ಣನವರಿಗೆ ‘ಕರ್ನಾಟಕ ಕಲಾಶ್ರೀ’, ‘ಅನನ್ಯ ಮನ್ಸೂರ್’ ಪ್ರಶಸ್ತಿ, ‘ರಾಗಶ್ರೀ’ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.
