ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಹಿರಿಯ ಸಾಹಿತಿ ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಕ.ಸಾ.ಪ.ದ ಸದಸ್ಯರು ದಿನಾಂಕ 30 ಆಗಸ್ಟ್ 2025ರಂದು ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ ಇವರ ಮನೆಗೆ ಭೇಟಿ ನೀಡಿದರು.
ಸಂಮಾನ ಸ್ವೀಕರಿಸಿದ ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ “ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು, ವಕೀಲ ವೃತ್ತಿಯನ್ನು ಕೈಗೊಂಡು, ಎಂಬತ್ತೈದನೆಯ ವಯಸ್ಸಿನಲ್ಲಿ ವಕೀಲ ವೃತ್ತಿಯನ್ನು ನಿಲ್ಲಿಸಿದ ಬಳಿಕ ಸಾಹಿತ್ಯದ ನಂಟಿನಿಂದ ಇದೀಗ ಆರು ವರ್ಷಗಳಲ್ಲಿ ಐದು ಕೃತಿಗಳನ್ನು (ಸ್ವಂತ, ಅನುವಾದಿತ) ಬರೆಯಲು ಸಾಧ್ಯವಾಗಿದೆ. ಇದರಲ್ಲಿ ತಮ್ಮ ರಾಘವಯ್ಯನ ಮತ್ತು ಮಡದಿ ಕಾವೇರಿಯ ಪಾತ್ರ ಬಹಳ ದೊಡ್ಡದು. ನನ್ನ ಬರವಣಿಗೆಯನ್ನು ಓದಿ, ತಪ್ಪಿದ್ದರೆ ತಿಳಿಸುವುದನ್ನು ಮತ್ತು ಮುದ್ರಣದ ಅಂತಿಮ ಹಂತದವರೆಗೂ ಸಹಾಯ ಮಾಡುವುದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು” ಎನ್ನುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು.
ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ರೇವಣ್ಕರ್ ಲೇಖಕರನ್ನು ಸಂಮಾನಿಸಿ, ಇಂದು ಇಂತಹ ಸಜ್ಜನ ಬಂಧು, ಸಾಹಿತಿ, ಪಂಡಿತ ವಿದ್ವಾಂಸ ಮುಳಿಯ ತಿಮ್ಮಪ್ಪಯ್ಯನವರ ಸುಪುತ್ರರ ಮನೆಗೆ ಬಂದಿರುವುದು ನಮ್ಮ ಭಾಗ್ಯ ಎನ್ನುತ್ತಾ, ನೂರು ವರ್ಷ ಪೂರೈಸಿ ನೂರು ಕೃತಿಗಳೂ ಬರಲಿ ಎಂದು ಹಾರೈಸಿದರು.
ಹೆಸರಾಂತ ವೈದ್ಯ ಸಾಹಿತಿ ಡಾ. ಮುರಲೀಮೋಹನ್ ಚೂಂತಾರು ಅಭಿನಂದನಾ ಮಾತುಗಳನ್ನಾಡಿ “ಇಂತಹ ಸಾಹಿತಿಗಳ ಕೃತಿಗಳನ್ನು ಇಂದಿನ ಯುವ ಜನತೆಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದರಲ್ಲದೆ, ಲೇಖಕರ ಸಂಗ್ರಹದಲ್ಲಿರುವ ಹಳೆಯ ಮಹತ್ವದ ಗ್ರಂಥಗಳನ್ನು ಮರು ಪ್ರಕಟಿಸುವುದರಿಂದ ಸಾಹಿತ್ಯ ಲೋಕಕ್ಕೆ ಅಪಾರ ಲಾಭವಿದೆ” ಎಂದರು.
ಗೋಪಾಲಕೃಷ್ಣ ಭಟ್ ಅವರ ಪತ್ನಿ ಕಾವೇರಿ ಅಮ್ಮ, ತಮ್ಮ ನಿವೃತ್ತ ವಿಜ್ಞಾನಿ ಮುಳಿಯ ರಾಘವಯ್ಯ, ಪುತ್ರಿಯರಾದ ದೇವಕಿ, ಡಾ. ಮಧುಮತಿ, ಅಳಿಯ ಭವಾನಿ ಶಂಕರ್, ಮೊಮ್ಮಗು ಪುಟಾಣಿ ಪ್ರಾಚಿ ಜೊತೆಗಿದ್ದರು. ಕ.ಸಾ.ಪ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸನತ್ ಕುಮಾರ್ ಜೈನ್, ಘಟಕದ ಡಾ. ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು. ರತ್ನಾವತಿ ಜೆ. ಬೈಕಾಡಿ ಪ್ರಾರ್ಥಿಸಿ, ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ವಂದಿಸಿ, ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿದರು.