ಮೈಸೂರು : ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ‘ಧ್ವನಿ ಫೌಂಡೇಶನ್’ ಆಯೋಜಿಸಿದ್ದ ಸರೋದ್ ವಾದಕ ದಿ. ರಾಜೀವ ತಾರಾನಾಥ ಹಾಗೂ ರಂಗಕರ್ಮಿ ದಿ. ನ. ರತ್ನ ಗೌರವ ಸ್ಮರಣೆ ಕಾರ್ಯಕ್ರಮವನ್ನು ದಿನಾಂಕ 24 ಜುಲೈ 2024ರಂದು ಗಾಯಕಿ ಎಚ್.ಆರ್. ಲೀಲಾವತಿ ಉದ್ಘಾಟಿಸಿದರು.
ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ “ಪಂಡಿತ್ ರಾಜೀವ್ ತಾರಾನಾಥ, ನ.ರತ್ನ ನಾಡಿನ ಪ್ರತಿಭಾವಂತರು, ಕನ್ನಡ ಬೌದ್ಧಿಕ ಲೋಕಕ್ಕೆ ಇಬ್ಬರು ಮಹನೀಯರ ಕೊಡುಗೆ ಅನನ್ಯ. ಕನ್ನಡ ಇತಿಹಾಸದಲ್ಲಿ ಉಳಿಯುವ ಶಾಶ್ವತ ಮೌಲ್ಯಗಳಾಗಿದ್ದಾರೆ. ವಾಚಿಕಾಭಿನಯದಲ್ಲಿ ಮೈಸೂರಿನ ಕಲಾವಿದರನ್ನು ಮೀರಿಸಲು ಕರ್ನಾಟಕದ ಇತರೆಡೆಯ ಕಲಾವಿದರಿಗೆ ಆಗುವುದಿಲ್ಲ. ಅದು ನ. ರತ್ನ ಅವರು ಮೈಸೂರು ಭಾಗದವರಿಗೆ ನೀಡಿದ ಬಳುವಳಿ. ಬೆಂಗಳೂರಿನ ನಾಟಕಗಳು ಕ್ರಿಯಾ ಪ್ರಧಾನವಾಗಿದ್ದರೆ, ಮೈಸೂರು ರಂಗತಂಡಗಳು ಆಡುವ ನಾಟಕಗಳು ವಾಚಿಕ ಪ್ರಧಾನವಾಗಿವೆ. ವಾಚಿಕ ಪ್ರಧಾನ ನಾಟಕವನ್ನು ಕನ್ನಡಕ್ಕೆ ಕೊಟ್ಟವರು ನ. ರತ್ನ ಅವರ ‘ಸಮತೆಂತೋ’ (ಸರಸ್ವತಿಪುರಂ ಮಧ್ಯದ ತೆಂಗಿನ ತೋಪು) ರಂಗತಂಡವಾಗಿದೆ. ಈ ಶ್ರೇಯ ರಂಗಭೂಮಿ ಇರುವವರೆಗೂ ಇರುತ್ತದೆ. ಮೈಕ್‌ನ ಸಮರ್ಥ ಬಳಕೆಯ ಬಗ್ಗೆ ಕನ್ನಡ ರಂಗಭೂಮಿಗೆ ನಿಜವಾಗಿಯೂ ತಿಳಿಸಿಕೊಟ್ಟು ಅದನ್ನು ಬಳಸುವ ಬಗ್ಗೆ ಕಲಿಸಿದವರು ರತ್ನ. 20ನೇ ಶತಮಾನದಲ್ಲಿ ರಾಜ್ಯ ಕಂಡ ಅತ್ಯಂತ ಪ್ರಖರ ಬುದ್ದಿಜೀವಿ ಪಂಡಿತ್ ರಾಜೀವ ತಾರಾನಾಥರಾದರೆ, ನ. ರತ್ನ ಕನ್ನಡ ರಂಗಭೂಮಿಗೆ ವಾಚಿಕಾಭಿನಯ ಕೌಶಲಗಳನ್ನು ಕಲಿಸಿದರು. ಇಂಥ ವ್ಯಕ್ತಿತ್ವಗಳು ನೀಡಿದ ಮೌಲ್ಯಗಳನ್ನು ಪ್ರಜ್ಞಾವಂತರು ಅರಿತುಕೊಳ್ಳಬೇಕು. ನವ್ಯ ಲೇಖಕರ ಒಡನಾಟವಿದ್ದ ರಾಜೀವರು ನವ್ಯ ವಿಮರ್ಶಕರಾಗಿಯೇ ಬೆಳೆದರು ಮತ್ತು ಅವರೇ ಕಟ್ಟಿಕೊಂಡ ಗೋಡೆಯನ್ನು ಲಂಗಿಸಿ, ಎಲ್ಲಿಯೂ ನಿಲ್ಲದಂತೆ ಮುಂದೆ ಸಾಗಿದರು. ಕನ್ನಡ ಸಂಸ್ಕೃತಿಯಲ್ಲಿ ಅವರ ಪ್ರಸ್ತುತತೆ ಎಂದಿಗೂ ಇರುತ್ತದೆ. ಗುರು ಎಲ್ಲಿದ್ದಾರೆಂದು ಕೇಳಿದಾಗ ನನ್ನ ಬೆರಳಲಿದ್ದಾರೆಂದು ಹೇಳಿದ್ದರು. ಅವರದ್ದು ಅಕ್ಕ, ಅಲ್ಲಮರಂತೆ ಅನುಭಾವ ಲೋಕ. ರಾಜೀವರು ಇತರ ನವ್ಯ ಕವಿಗಳು ಮತ್ತು ಲೇಖಕರಂತೆ ಕಟ್ಟಿದ ಚೌಕಟ್ಟಿನಲ್ಲಿ ಉಳಿದುಕೊಳ್ಳದೇ ಅದರಾಚೆಗೆ ಜಿಗಿದರು. ಬೌದ್ಧಿಕ ಜಿಗಿಯುವಿಕೆ ಅವರನ್ನು ಪ್ರಖರ ಪಂಡಿತರನ್ನಾಗಿಸಿತು. ಬೌದ್ಧಿಕತೆಯನ್ನು ಸಂಗೀತಕ್ಕೆ ತಂದು, ಅದನ್ನು ಅಂತರಂಗಕ್ಕೆ ಇಳಿಸಿ, ಅಲ್ಲಿಯೂ ಸ್ಥಾಯಿಯಾಗದೇ ಜಿಗಿದು ಹೊರಬಂದು ಕ್ರಿಯೆಯಾಗಿಸುವ ಬುದ್ದಿವಂತಿಕೆ ಅವರಲ್ಲಿತ್ತು” ಎಂದು ವಿಶ್ಲೇಷಿಸಿದರು.
ರಾಜೀವರ ಕುರಿತು ಲೇಖಕಿ ಶೈಲಜಾ ವೇಣುಗೋಪಾಲ್, ರತ್ನ ಅವರ ನೆನೆಪುಗಳನ್ನು ಸುಗಮ ಸಂಗೀತ ಗಾಯಕಿ ಎಚ್.ಆರ್. ಲೀಲಾವತಿ ಹಂಚಿಕೊಂಡರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಧ್ವನಿ ಫೌಂಡೇಶನ್ ಸಂಸ್ಥಾಪಕಿ ಡಾ. ಶ್ವೇತಾ ಮಡಪ್ಪಾಡಿ ಇವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪಂಡಿತ್ ರಾಜೀವ್ ತಾರಾನಾಥ್ ಇವರ ಶಿಷ್ಯರಾದ ಶ್ರೀ ಸಚಿನ್ ಹಂಪಿ ಇವರು ಸರೋದ್ ವಾದನ ಮತ್ತು ಶ್ರೀ ದೇವಾನಂದ ವರಪ್ರಸಾದ್ ಮತ್ತು ತಂಡದವರಿಂದ ರಂಗ ನಮನ – ನ. ರತ್ನ ನಾಟಕದ ಹಾಡುಗಳನ್ನು ಪ್ರಸ್ತುತ ಪಡಿಸಿದರು.