ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ದಿನಾಂಕ 08 ಸೆಪ್ಟೆಂಬರ್ 2024ರಂದು 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ದ್ವಿತೀಯ ದಿನದ ಸಭಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ “ಕಳೆದ ಹದಿನೇಳು ವರ್ಷಗಳಿಂದ ಬಂಟರ ಮಾತೃ ಸಂಘವು ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ಒಳಗೊಂಡು ಗಣೇಶೋತ್ಸವವನ್ನು ಆಚರಿಸುತ್ತಿರುವುದು ಮಾನವ ಸಮಾಜಕ್ಕೆ ಮಾದರಿಯಾಗಿದೆ” ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಾಗೂ ಸಂಘದ ‘ನಮ್ಮ ಸಂಪರ್ಕ’ ಮಾಸಪತ್ರಿಕೆಯ ಸಂಪಾದಕ ಬಿ. ರವೀಂದ್ರ ಶೆಟ್ಟಿ, ಪತ್ರಿಕೆಯ ನಿಕಟ ಪೂರ್ವ ಸಂಪಾದಕ, ಸಾಹಿತಿ ಮತ್ತು ಸಂಘಟಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಧಾರ್ಮಿಕ ಮುಂದಾಳು ಟಿ. ಭಾಸ್ಕರ ರೈ ಬ್ರಹ್ಮಾವರ ಹಾಗೂ ಅಂತಾರಾಷ್ಟ್ರೀಯ ಈಜುಪಟು ಚಿಂತನ್ ಎಸ್. ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.
ಯಕ್ಷಗಾನ ವಿದ್ವಾಂಸ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರು ಸನ್ಮಾನಿತರ ಪರವಾಗಿ ಮಾತನಾಡಿ “ಸಮಾಜದ ಒಂದು ಭಾಗವಾಗಿ ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರನ್ನು ಗುರುತಿಸಿ ಪುರಸ್ಕರಿಸುವ ಕೆಲಸಗಳನ್ನು ಸಂಘ – ಸಂಸ್ಥೆಗಳು ಅಲ್ಲಲ್ಲಿ ಮಾಡುತ್ತಿರುವುದು ಶ್ಲಾಘನೀಯ. ಬಂಟರ ಯಾನೆ ನಾಡವರ ಮಾತೃ ಸಂಘವು ಮಂಗಳೂರನ್ನು ಕೇಂದ್ರವಾಗಿರಿಸಿ ಅಂತಹ ಕಾರ್ಯಗಳನ್ನು ಅವಿಭಜಿತ ಜಿಲ್ಲೆಯಲ್ಲಿ ದಶಕಗಳಿಂದ ಮಾಡಿಕೊಂಡು ಬರುತ್ತಿದೆ. ಈ ವಿಧವಾದ ಮಾನ – ಸಮ್ಮಾನಗಳು ಆಯಾಯ ಫಲಾನುಭವಿಗಳ ಸಾಮಾಜಿಕ ಬದ್ಧತೆಗೆ ಸಂದ ವಿಶೇಷ ಗೌರವ” ಎಂದು ಹೇಳಿದರು. ಮುಂಬೈಯಲ್ಲಿ ಬಿಡುಗಡೆಗೊಂಡ ತನ್ನ ಮೂರು ಕೃತಿಗಳನ್ನು ಅವರು ಕಾರ್ಯದರ್ಶಿ ಕೆ.ಎಂ. ಶೆಟ್ಟರ ಮೂಲಕ ಮಾತೃ ಸಂಘದ ಗ್ರಂಥಾಲಯಕ್ಕೆ ಅರ್ಪಿಸಿದರು.
ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಯಶಪಾಲ್ ಸುವರ್ಣ ಮತ್ತು ಭರತ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ.ಎ. ಅಶೋಕ್ ಶೆಟ್ಟಿ, ಮುಂಬೈಯ ಹಿರಿಯ ಲೆಕ್ಕಪರಿಶೋಧಕ ಸಿ.ಎ. ಎನ್.ಬಿ. ಶೆಟ್ಟಿ, ಬ್ಯಾಂಕ್ ಆಫ್ ಬರೋಡದ ಪ್ರಧಾನ ವ್ಯವಸ್ಥಾಪಕ ರಾಜೇಶ್ ಖನ್ನಾ, ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ಸಿ.ಎ. ರಾಮ ಮೋಹನ್ ರೈ, ಹಿರಿಯ ಸದಸ್ಯ ಶೆಡ್ಡೆ ಮಂಜುನಾಥ ಭಂಡಾರಿ, ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಆಶಾಜ್ಯೋತಿ ರೈ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಕೃಷ್ಣ ಪ್ರಸಾದ್ ರೈ, ಗಣೇಶೋತ್ಸವ ಸಮಿತಿ ಸಂಚಾಲಕರುಗಳಾದ ದಿವಾಕರ ಸಾಮಾನಿ, ಅಶ್ವತ್ಥಾಮ ಹೆಗ್ಡೆ, ಮನೀಶ್ ರೈ ಹಾಗೂ ಸಂತೋಷ್ ಶೆಟ್ಟಿ ಶೆಡ್ಡೆ ಉಪಸ್ಥಿತರಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವನೆಗೈದು ಸ್ವಾಗತಿಸಿ, ಮಾತೃ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ವಂದಿಸಿ, ಡಾ. ಮಂಜುಳಾ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ನಿರೂಪಿಸಿದರು.