ಸುಬ್ರಹ್ಮಣ್ಯ : ಶ್ರೀ ಶ್ರೀಕುರು ಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಳದಲ್ಲಿ ದಿನಾಂಕ 26 ಸೆಪ್ಟೆಂಬರ್ 2025ರಂದು ನಡೆದ ನವರಾತ್ರಿ ಪರ್ವ ಸಮಯದ ವೇದಿಕೆಯಲ್ಲಿ ಯಕ್ಷ ಕಲಾವಿದ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರಿಗೆ ಕಲಾವಿದ ಗೌರವವನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಮೊಕ್ತೇಸರ ಪಿ. ಮಹಾಬಲ ಚೌಟ “ಕಲಾವಿದನಾಗಿ ಯಕ್ಷರಂಗವನ್ನು ಆಳಬೇಕಾದರೆ ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ಅದನ್ನು ತನ್ನ ಬಾಲ್ಯದಿಂದಲೇ ಸಾಧಿಸಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆಯವರು ಇಂದು ಪಾತ್ರ ತನ್ಮಯತೆಯ ಮೂಲಕ ರಂಗರಸನಾಗಿ ಮೆರೆಯುತ್ತಿದ್ದಾರೆ. ಶರನ್ನವರಾತ್ರಿಯ ಈ ಶುಭಾವಸರದಲ್ಲಿ ಇಂತಹಾ ಮೇರು ಕಲಾವಿದನನ್ನು ಗೌರವಿಸಲು ನಾವು ಹೆಮ್ಮೆಪಡುತ್ತೇವೆ. ಮುಂದೆಯೂ ಇದೇ ರೀತಿಯ ಗೌರವ, ಕೀರ್ತಿಗಳನ್ನು ಹೊಂದಿಕೊಂಡು ರಾರಾಜಿಸುವಂತಾಗಲು ಶ್ರೀದೇವಿ ಹರಸಲಿ” ಎಂದು ಹೇಳಿದರು.
ನಿರೂಪಕ, ಕಲಾವಿದ ಕದ್ರಿ ನವನೀತ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ವಿಜಯಲಕ್ಷ್ಮೀ ಎಲ್. ನಿಡ್ವಣ್ಣಾಯ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟಿಗಳಾದ ಮೋಹನ್ ಶೆಟ್ಟಿ, ಸುನಿಲ್ ಪಾಲ್ದಡಿ, ಲೋಕೇಶ್ ಗುರಿಕಂಡ, ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ಇದರ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿದರು. ಬಳಿಕ ಚಿನ್ಮಯ ಭಟ್ ಕಲ್ಲಡ್ಕ, ಚೈತನ್ಯಕೃಷ್ಣ ಪದ್ಯಾಣ, ವೇಣುಗೋಪಾಲ ಭಟ್ ಮಾಂಬಾಡಿ, ಮಧುಸೂದನ ಅಲೆವೂರಾಯ ಹಿಮ್ಮೇಳದಲ್ಲಿದ್ದರೆ, ಜಯಪ್ರಕಾಶ್ ಶೆಟ್ಟಿ, ಜಬ್ಬಾರ್ ಸಮೋ ಹಾಗೂ ಇತರರ ಕೂಡುವಿಕೆಯಿಂದ ‘ರಾಮ ನಿರ್ಯಾಣ’ ತಾಳಮದ್ದಳೆ ಜರಗಿತು.