ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಇವರ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ 2024ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ “ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ. ಅರೆಭಾಷಿಕರದ್ದು ವಿಭಿನ್ನ ಸಂಸ್ಕೃತಿ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರೆಭಾಷೆ ಗೌಡರು ಹೆಚ್ಚಾಗಿ ವಾಸಿಸುತ್ತಿದ್ದು, ಇವರ ಜನಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚಿದೆ. ಕರ್ನಾಟಕದಲ್ಲಿ 230 ಸಣ್ಣ ಭಾಷೆಗಳಿವೆ. ಇವೆಲ್ಲವೂ ಕನ್ನಡದಿಂದಲೇ ಹುಟ್ಟಿದ್ದು, ಅರೆಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಅಕಾಡೆಮಿ ಮಾಡಲಿ” ಎಂದರು.

ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ಸಾಹಿತ್ಯ ಮತ್ತು ಪತ್ರಿಕೋದ್ಯಮ ಸೇವೆಗಾಗಿ ಸುದ್ಧಿ ಸಮೂಹ ಸಂಸ್ಥೆಯ ಮಾಲಕ ಯು.ಪಿ. ಶಿವಾನಂದ, ಅರೆಭಾಷೆ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆಗಾಗಿ ಕೆ.ಆರ್. ಗಂಗಾಧರ ಹಾಗೂ ಸಂಘಟನೆ ಮತ್ತು ಆಡಳಿತಾತ್ಮಕ ಸೇವೆಗಾಗಿ ಡಿ.ಎಸ್. ಆನಂದ ಇವರಿಗೆ ಸರ್ಕಾರದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ವಿಧಾನ ಸಭಾಧ್ಯಕ್ಷ ಡಾ. ಯು.ಟಿ. ಖಾದರ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಂ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ ಉಪಸ್ಥಿತರಿದ್ದರು. ಅರೆಭಾಷೆ ಅಕಾಡೆಮಿ ಸದಸ್ಯ ಡಾ. ಎನ್.ಎ. ಜ್ಞಾನೇಶ್ ಸ್ವಾಗತಿಸಿದರು.
