ಬೆಳ್ತಂಗಡಿ : ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇದರ ಆಶ್ರಯದಲ್ಲಿ ಕ.ಸಾ.ಪ. ಸುಳ್ಯ ತಾಲೂಕು ಘಟಕ, ಪ್ರೆಸ್ ಕ್ಲಬ್ ಸುಳ್ಯ ಮತ್ತು ಕಳಂಜ ಯುವಕ ಮಂಡಲ ಸಹಯೋಗದಲ್ಲಿ ಡಾ. ಪುರುಷೋತ್ತಮ ಬಿಳಿಮಲೆಯವರ ಕೃತಿ ‘ಹುಡುಕಾಟ’ ಅನಾವರಣ ಹಾಗೂ ಸಂವಾದ ಕಾರ್ಯಕ್ರಮವು ತಂಟೆಪ್ಪಾಡಿಯ ಪ್ರಶಾಂತ ಪರಿಸರದ ಸುಂದರ ‘ನಿನಾದ’ ಕೇಂದ್ರದ ವೇದಿಕೆಯಲ್ಲಿ ದಿನಾಂಕ 07 ಡಿಸೆಂಬರ್ 2024ರಂದು ನೆರವೇರಿತು.
ವೇದಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಡಾ. ಬಿಳಿಮಲೆಯವರು ಸಂವಾದ ಕಾರ್ಯಕ್ರಮದಲ್ಲಿ ಆಗಮಿಸಿದ ಗಣ್ಯ ವ್ಯಕ್ತಿಗಳೊಂದಿಗೆ ತಮ್ಮ ಕಾರ್ಯ ಕ್ಷೇತ್ರದ ಹಾಗೂ ಕನ್ನಡ ಭಾಷೆ ನಾಡು, ನುಡಿ, ಜಲ, ಇತಿಹಾಸ, ಪುರಾಣ ಹಾಗೂ ಸಂಪ್ರದಾಯಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ‘ನಿನಾದ’ ಕೇಂದ್ರದ ಅಧ್ಯಕ್ಷ ಪಿ. ಐತ್ತಪ್ಪ ಶೆಟ್ಟಿ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಬೆಂಗಳೂರಿನ ಚಿರಂತ್ ಪ್ರಕಾಶನದ ಪರಮೇಶ್ವರ್ ಹೆಚ್., ಕ.ಸಾ.ಪ. ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಸುಳ್ಯ ಪ್ರೆಸ್ ಕ್ಲಬ್ಬಿನ ಅಧ್ಯಕ್ಷ ಹರೀಶ್ ಬಂಟ್ವಾಳ, ಕಳಂಜ ಯುವಕ ಮಂಡಲದ ಅಧ್ಯಕ್ಷ ಗಂಗಾಧರ ತೋಟದ ಮೂಲೆ ಉಪಸ್ಥಿತರಿದ್ದರು.
ನಿನಾದ ಕೇಂದ್ರದ ರೂವಾರಿ ವಸಂತ ಶೆಟ್ಟಿಯವರು ತಮ್ಮ ಸ್ವಾಗತ ಭಾಷಣದಲ್ಲಿ ತಮ್ಮ ಹಾಗೂ ಬಿಳಿಮಲೆಯವರ ಹಲವು ವರ್ಷಗಳ ಸ್ನೇಹ ಸಂಬಂಧವನ್ನು ನೆನಪಿಸಿಕೊಂಡರು. ಕಾರ್ಯಕ್ರಮದ ನಿರೂಪಣೆ ಹರೀಶ್ ಬಂಟ್ವಾಳ ನಿರ್ವಹಿಸಿದರು. ಕೊನೆಯಲ್ಲಿ ನಿವೃತ್ತ ಪ್ರಾಂಶುಪಾಲ ರಾಮಕೃಷ್ಣ ಭಟ್ ಚೂಂತಾರು ವಂದಿಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಹಲವಾರು ಸಾಹಿತಿಗಳು, ವಿದ್ವಾಂಸರು, ಕವಿಗಳು, ಉದ್ಯಮಿಗಳು ಹಾಗೂ ಇನ್ನಿತ್ತರ ಗಣ್ಯರು ಆಗಮಿಸಿದ್ದರು.