ಕುಂದಾಪುರ : ಕೊಮೆ, ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಚಿಣ್ಣರು ದಿನಾಂಕ 25-12-2023ರಂದು ಕುಂದಾಪ್ರ ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷ್ಣಾರ್ಜುನರ ಕಾಳಗದ ರುಕ್ಮಿಣಿ ಸುಭದ್ರ ಸಂವಾದ ಹಾಗೂ ಕೃಷ್ಣಾರ್ಜುನರ ಸಂವಾದವನ್ನು ಹೂವಿನಕೋಲು ಪ್ರಕಾರದಲ್ಲಿ ಪ್ರಸ್ತುತಪಡಿಸಿದರು.
“ಕಳೆದ ಹಲವಾರು ವರ್ಷಗಳಿಂದ ಅಳಿವಿನಂಚಿನಲ್ಲಿರುವ ಯಕ್ಷಗಾನದ ಪ್ರಕಾರವಾದ ಹೂವಿನಕೋಲು ಕಾರ್ಯಕ್ರಮವನ್ನು ಮತ್ತೆ ಮನೆ ಮನೆಗಳಲ್ಲಿ ನವರಾತ್ರಿ ಸಂದರ್ಭಗಳಲ್ಲಿ ಪ್ರಸ್ತುತ ಪಡಿಸುತ್ತಿರುವ ಸಂಸ್ಥೆ ಯಶಸ್ವೀ ಕಲಾವೃಂದದ ಕಾರ್ಯ ಸಮಾಜದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಸ್ಥೆಯ ಕಾರ್ಯವನ್ನು ಮನಗಂಡು ಸುಪ್ರೀತಾ ಪುರಾಣಿಕ್ ಕುಂದ ಕಂಠಗಳ ಪ್ರಕೃತಿಯ ಸ್ವರ ‘ರೇಡಿಯೋ ಕುಂದಾಪ್ರ’ ಇಲ್ಲಿ ಸಮಾರೋಪವಾಗಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡದ್ದು ನಿಜಕ್ಕೂ ಹೆಚ್ಚು ಪ್ರಸ್ತುತ. ರೇಡಿಯೋ ಕುಂದಾಪುರದ ಮೂಲಕ ಇನ್ನಷ್ಟು ಜನರಿಗೆ ಕಲೆಯನ್ನು ಧ್ವನಿ ವಾಹಿನಿಯ ಮೂಲಕ ಬಿತ್ತರಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ” ಎಂದು ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಅಭಿಪ್ರಾಯಪಟ್ಟರು.
“ನವರಾತ್ರಿ ಸಂದರ್ಭದಿಂದ ಮೊದಲ್ಗೊಂಡು ಶಿರಸಿಯಿಂದ ಮಂಗಳೂರು ತನಕ ತಿರುಗಾಡಿ ಸುಮಾರು 180 ಮನೆಗಳು, ದೇವಸ್ಥಾನಗಳು, ಇನ್ನಿತರ ಪ್ರದೇಶಗಳಲ್ಲಿ ಹೂವಿನಕೋಲು ಯಕ್ಷ ಪ್ರಕಾರದ ಕಲಾ ಚಟುವಟಿಕೆಯನ್ನು ಪರಿಚಯಿಸಲಾಗಿದೆ. ಹೆಚ್ಚು ಪ್ರಾಂತ್ಯ ಹಾಗೂ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಶುಭ ಸಂದೇಶವನ್ನು ನೀಡುವ ಮುಖೇನ ಈ ವರ್ಷದ ತಿರುಗಾಟ ಮುಗಿಸಲಾಗಿದೆ. ಸಮಾರೋಪವಾಗಿ ‘ರೇಡಿಯೋ ಕುಂದಾಪುರ’ ಹೊಸ ಧ್ವನಿ ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ” ಎಂದು ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ಅಭಿಪ್ರಾಯಪಟ್ಟರು.
ಶ್ರೀಧರ ಪುರಾಣಿಕ, ಗೋಪಾಲ ಪೂಜಾರಿ, ಕು. ಪಂಚಮಿ ವೈದ್ಯ, ಮಾ. ಕಿಶನ್ ಪೂಜಾರಿ, ಮಾ. ಪವನ್, ಕು. ಆರಭಿ, ಕು. ಪರಿಣಿತ ವೈದ್ಯ, ಕು. ಅನಘ ಶೆಟ್ಟಿ ಉಪಸ್ಥಿತರಿದ್ದರು.