ವಿದ್ಯಾಗಿರಿ, ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ದಿನಾಂಕ 11 ಡಿಸೆಂಬರ್ 2024 ರಿಂದ 15 ಡಿಸೆಂಬರ್ 2024ರ ವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’30ನೇ ವರ್ಷದ ‘ಅಳ್ವಾಸ್ ವಿರಾಸತ್” ಕಾರ್ಯಕ್ರಮದ ಉದ್ಘಾಟನೆ ಮಂಗಳವಾರ ಸಂಜೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ “ವಿಶ್ವವನ್ನೇ ಹೃದಯದಲ್ಲಿ ತುಂಬುವ ಹಬ್ಬವೇ ‘ವಿರಾಸತ್’. ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮ. ಸಾಹಿತ್ಯ ಮತ್ತು ಸಂಸ್ಕೃತಿ ಜೊತೆಯಾಗಿ ಮೇಳೈಸಿದ ಕಾರ್ಯಕ್ರಮ. ನಮ್ಮ ಸಾಂಸ್ಕೃತಿಕ ಸಂಪತ್ತು ಹೆಚ್ಚಾದಾಗ ಮನಸ್ಸು ಅರಳುತ್ತದೆ. ಎಲ್ಲರಿಗೂ ಸಂತೋಷ ನೀಡುವ ವ್ಯಕ್ತಿತ್ವವೇ ಆಳ್ವ. ಒಳ್ಳೆಯದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ. ಆ ಹಾದಿಯಲ್ಲಿ ಸಮಾಜ, ದೇಶ ಬೆಳೆಯಬೇಕು. ನಾವೂ ಪ್ರಕೃತಿಯನ್ನು ಹಾಗೂ ಹೃದಯವನ್ನು ಅರಳಿಸಬೇಕು. ಆಳ್ವಾಸ್ ಕೃಷಿ ಮೇಳ ಕಂಡು ನೀವೂ ಸಣ್ಣ ಕೈತೋಟ ಮಾಡಿ. ಮಣ್ಣು, ಪರಿಸರ ಪ್ರೀತಿಸಿ. ಪಂಚೇಂದ್ರೀಯಗಳಿಗೆ ಉಣಬಡಿಸುವ ಹೃದಯ ವೈಶಾಲ್ಯದ ವ್ಯಕ್ತಿತ್ವ ಡಾ. ಮೋಹನ ಆಳ್ವ ಅವರದ್ದು. ಇಂತಹ ವ್ಯಕ್ತಿತ್ವ ನಾಡಿನಾದ್ಯಂತ ಹೆಚ್ಚಲಿ.” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಂ. ಜಿ. ಆರ್. ಗ್ರೂಪ್ ಇದರ ಅಧ್ಯಕ್ಷರಾದ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ “ಆಳ್ವರ ದೃಷ್ಟಿಯೇ ಇಲ್ಲಿ ಕ್ರಿಯೆಯಾಗಿ ರೂಪುಗೊಂಡಿದೆ. ನಾನು ಅವರನ್ನು ನಾಲ್ಕು ದಶಕಗಳಿಂದ ಕಂಡಿದ್ದೇನೆ. ಅವರ ಪ್ರಯೋಗ ಇಂದು ನಾಡಿಗೆ ಕೊಡುಗೆ ನೀಡಿದೆ. ಆಳ್ವಾಸ್ ಆವರಣವು ಚಂದಮಾಮದ ಅಮರಾವತಿ ಹಾಗೂ ಇಂದ್ರ ನಗರಿಯನ್ನು ನೆನಪಿಸುತ್ತದೆ. ಹೊಸ ಲೋಕವೇ ಇಲ್ಲಿ ಸೃಷ್ಟಿಯಾಗಿದೆ.” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ “ಅಂದು ಊರಿಗೆ ಸೀಮಿತವಾಗಿದ್ದ ವಿರಾಸತ್ ಇಂದು ರಾಷ್ಟ್ರೀಯ ಹಬ್ಬವಾಗಿದೆ. ಇಂದು ದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 52ಕೋಟಿ ಇದೆ. ಯುವ ಸಂಪತ್ತಿನ ಬಗ್ಗೆ ನಾವು ಯೋಚಿಸಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಕ್ರೀಡೆ, ಸಾಂಸ್ಕೃತಿಕ ತರಬೇತಿ ನೀಡುತ್ತಿದ್ದೇವೆ. ಮಂಗಳೂರು ವಿಶ್ವವಿದ್ಯಾನಿಲಯದ 49 ಅಥ್ಲೆಟಿಕ್ಸ್ ದಾಖಲೆ ಆಳ್ವಾಸ್ ಹೆಸರಿನಲ್ಲಿದೆ. ನಮ್ಮ ಸಂಸ್ಥೆಯಲ್ಲಿ ಪ್ರತಿವರ್ಷ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಸ್ಕೃತಿಕ ತರಬೇತಿ ಪಡೆದು, ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ವಿರಾಸತ್ ಅನ್ನು ಸಮಗ್ರವಾಗಿ ರೂಪಿಸಲಾಗಿದ್ದು, ಪಂಚೇಂದ್ರಿಯಗಳಿಗೆ ಜ್ಞಾನ ನೀಡುವ ಕಾರ್ಯಕ್ರಮವಾಗಿದೆ. ಯುವಕರು, ಹಿರಿಯರು, ವೃದ್ಧರೆಲ್ಲರಿಗೂ ವಿರಾಸತ್ ಮುದ ನೀಡಲಿದೆ.” ಎಂದರು.
ಆರಂಭದಲ್ಲಿ ಗಿರಿಧರ್ ಅವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಮೂಡಿದ ‘ಬೆಳಕಾಗಿ ಬಾ’ ಹಾಗೂ ಡಾ. ಎನ್. ಕೆ. ಪದ್ಮನಾಭ ವಿರಚಿತ ‘ಪರಹಿತ ಬಯಸೋ’ ಪ್ರಾರ್ಥನೆಯನ್ನು ಹಾಡಲಾಯಿತು. ಆಳ್ವಾಸ್ ವಿರಾಸತ್ 30ನೇ ವರ್ಷದ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯು ಹೊರತಂದಿರುವ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಅಂಚೆ ಲಕೋಟೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ. ಪಿ. ದಂಪತಿ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ, ಮುಂಬಯಿ ಹೇರಂಬಾ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪ್ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ, ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಆನುವಂಶಿಕ ಮೊಕ್ತೇಸರರಾದ ಲಕ್ಷ್ಮೀ ನಾರಾಯಣ ಅಸ್ರಣ್ಣ, ಶಾರದಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಂ. ಬಿ. ಪುರಾಣಿಕ್, ಬರೋಡ ಶಶಿ ಕೇಟರಿಂಗ್ ಸರ್ವೀಸಸ್ ಇದರ ಆಡಳಿತ ನಿರ್ದೇಶಕರಾದ ಶಶಿಧರ ಶೆಟ್ಟಿ ಬೆಂಗಳೂರು, ಕೆ. ಎಲ್. ಎನ್. ಎಂಜಿನಿಯರಿಂಗ್ ಇದರ ಆಡಳಿತ ನಿರ್ದೇಶಕರಾದ ಪ್ರಸನ್ನ ಕುಮಾರ್ ಶೆಟ್ಟಿ ಬಳ್ಳಾರಿ, ಕುಮಾರಸ್ವಾಮಿ ಮಿನರಲ್ ಎಕ್ಸ್ ಪೋರ್ಟ್ ಇದರ ಎಂ. ರವೀಂದ್ರನಾಥ ಆಳ್ವ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕಲ್ಕೂರ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪುತ್ತಿಗೆ ಗ್ರಾಮ ಪಂಚಾಯಿತ್ ಇದರ ಅಧ್ಯಕ್ಷೆಯಾದ ಕು. ರಾಧಾ, ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯೂಸ್ ಇದರ ಆಡಳಿತ ನಿರ್ದೇಶಕರಾದ ಕೆ. ಶ್ರೀಪತಿ ಭಟ್, ಕೆನರಾ ಬ್ಯಾಂಕ್ ಇದರ ಸುಧಾಕರ್ ಕೊಠಾರಿ, ಪ್ರಮುಖವಾದ ಜಯಶ್ರೀ ಅಮರನಾಥ ಶೆಟ್ಟಿ, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ತಿಮ್ಮಯ್ಯ ಶೆಟ್ಟಿ, ರಾಮಯ್ಯ ಶೆಟ್ಟಿ, ಪತ್ರಕರ್ತ ಶ್ರೀನಿವಾಸ ಇಂದಾಜೆ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಮಂಗಳೂರು ಭಾರತ್ ಇನ್‌ಫ್ರಾಟೆಕ್ ಇದರ ಮುಸ್ತಾಫ ಎಸ್. ಎಂ., ಮೂಡುಬಿದಿರೆ ಬಿಮಲ್ ಕನ್‌ಸ್ಟ್ರಕ್ಷನ್ಸ್ ಇದರ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮೇಳಗಳು:
ಅನ್ವೇಷಣಾತ್ಮಕ ಶತಾಯುಷಿ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳಗಳೂ ಮಂಗಳವಾರ ಬೆಳಿಗ್ಗೆ ಉದ್ಘಾಟನೆಗೊಂಡಿದ್ದು, 15 ಡಿಸೆಂಬರ್ 2024ರವರೆಗೆ ನಡೆಯಲಿವೆ.