ಮೂಡುಬಿದಿರೆ: ಆಳ್ವಾಸ್ ಪದವಿ-ಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 06 ಸೆಪ್ಟೆಂಬರ್ 2024ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.
ಕಲಾ ಸಂಘವನ್ನು ಉದ್ಘಾಟಿಸಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಮಾತನಾಡಿ “ಕಲೆ ಜೀವನದ ಮೆರುಗನ್ನು ಹೆಚ್ಚಿಸಿ ಬದುಕನ್ನು ಶ್ರೀಮಂತಗೊಳಿಸುತ್ತದೆ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶಗಳಿದ್ದು ಅದನ್ನು ಬಳಸಿಕೊಂಡು ಯಶಸ್ವಿಯಾಗಬೇಕು. ಪೋಷಕರ ಮೊಗದಲ್ಲಿ ನಗು ಮೂಡಿಸುವ ಕೆಲಸವನ್ನು ಮಕ್ಕಳು ಮಾಡಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್. ಮಾತನಾಡಿ “ಇಂದು ವಿಜ್ಞಾನ, ವಾಣಿಜ್ಯ ಪದವೀಧರರು ನಿಮ್ಮೊಂದಿಗೆ ಸ್ಪರ್ಧೆಯಲ್ಲಿದ್ದಾರೆ. ಸರಕಾರಿ ಸ್ವಾಮ್ಯದ ಎಲ್ಲಾ ಉದ್ಯೋಗಳಲ್ಲೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವಿದೆ. ನಿರಂತರ ಪ್ರಯತ್ನದಿಂದ ಯಶಸ್ಸನ್ನು ಪಡೆಯಬಹುದು.” ಎಂದರು.
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜೀವನ್‌ರಾಂ ಸುಳ್ಯ ಮಾತನಾಡಿ “ನಿರಂತರ ದುಡಿಮೆ ಮತ್ತು ಕಾಲದ ಮಹತ್ವವನ್ನು ಅರಿತುಕೊಂಡಾಗ ಯಶಸ್ಸು ನಮ್ಮದಾಗುತ್ತದೆ. ಕಳೆದ ಸಮಯ ಮತ್ತೆ ಯಾರಿಗೂ ಮರಳಿ ಬರಲಾರದು. ವಿಜ್ಞಾನದ ವಿದ್ಯಾರ್ಥಿಗಳೆಂದರೆ ಬುದ್ದಿವಂತರು, ಕಲಾ ವಿಭಾಗದ ವಿದ್ಯಾರ್ಥಿಗಳೆಂದರೆ ದಡ್ಡರು ಎಂಬ ಸರಳ ಮಾತು ಪ್ರಚಲಿತದಲ್ಲಿದೆ. ಇದು ಸಲ್ಲದು. ಸಾಮಾನ್ಯವಾಗಿ ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಒತ್ತಡದ ಮನೋಭಾವವಿರುತ್ತದೆ. ಆದರೆ ಕಲಾ ವಿಭಾಗದ ವಿದ್ಯಾರ್ಥಿಗಳು ಸಂತೋಷದಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕನ್ನು ಒತ್ತಡ ರಹಿತವಾಗಿ ರೂಪಿಸಿಕೊಳ್ಳಬಹುದು.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಮುಖ್ಯಸ್ಥರಾದ ವೇಣುಗೋಪಾಲ ಶೆಟ್ಟಿ ಮಾತನಾಡಿ “ಕಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ವಿಷಯದ ವಿಶಾಲತೆ ಹಾಗೂ ವೈವಿಧ್ಯತೆಯನ್ನು ಅರಿತುಕೊಳ್ಳಬೇಕು. ಮನುಷ್ಯ ಒಂಟಿಯಾಗಿ ಬದುಕಲಾರ ಅವನು ಸಮಾಜದೊಂದಿಗೆ ಬದುಕುವುದು ಅನಿವಾರ್ಯ. ಮಾನವೀಯ ಅಂತಃ ಕರಣ, ಪ್ರೀತಿ-ವಿಶ್ವಾಸ, ನಂಬಿಕೆಗಳು ಮೇಳೈಸಿದರೆ ಮನುಷ್ಯ ನಿಜವಾದ ಮಾನವನಾಗುತ್ತಾನೆ. ವಿದ್ಯಾರ್ಥಿಗಳು ಓದು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಿಮ್ಮನ್ನು ತಾವು ಅರಿತುಕೊಳ್ಳುವ ಮೂಲಕ ಬದುಕಿನಲ್ಲಿ ಯಶಸ್ಸನ್ನು ಕಾಣಿರಿ.” ಎಂದು ಶುಭ ಹಾರೈಸಿದರು.
ಕಲಾ ವಿಭಾಗದ ಸಂಯೋಜಕ ದಾಮೋದರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಬೋರಮ್ಮ ಸ್ವಾಗತಿಸಿ, ಸ್ಪೂರ್ತಿ ಅತಿಥಿಗಳನ್ನು ಪರಿಚಯಿಸಿ, ರಕ್ಷಿತಾ ಸಂವಿಧಾನ ಪೀಠಿಕೆಯನ್ನು ಬೋಧಿಸಿ, ಚಿನ್ಮಯಿ ಕಾರ್ಯಕ್ರಮ ನಿರ್ವಹಿಸಿದರು.