ಉಳ್ಳಾಲ: ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಮಂಜನಾಡಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ ‘ಯಕ್ಷಶಿಕ್ಷಣ ಶಿಬಿರ’ದ ಉದ್ಘಾಟನಾ ಸಮಾರಂಭವು ದಿನಾಂಕ 11 ಏಪ್ರಿಲ್ 2025ರಂದು ಬೊಟ್ಟಿಕೆರೆಯಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಜಾನಪದ ವಿದ್ವಾಂಸರಾದ ಕೆ. ಚಿನ್ನಪ್ಪ ಗೌಡ ಮಾತನಾಡಿ “ಯಕ್ಷಗಾನ ಸ್ಪಂದನಶೀಲ ಗುಣವುಳ್ಳ ವಿಶೇಷ ಕಲೆಯಾಗಿದ್ದು, ಇದಕ್ಕೆ ದೀರ್ಘವಾದ ಪರಂಪರೆ ಇದೆ. ಈ ಪರಂಪರೆಯನ್ನು ಹಿರಿಯ ಕಲಾವಿದರು ಸೇರಿ ಕಟ್ಟಿ ಬೆಳೆಸುತ್ತಾ ಬಂದಿದ್ದಾರೆ. ಯಕ್ಷಗಾನವು ಎಲ್ಲರೂ ಸೇರಿ ಪ್ರದರ್ಶಿಸುವ ಸಾಮೂಹಿಕ ಹಾಗೂ ಚಲನಶೀಲತೆ ಇರುವ ಕಲೆಯಾಗಿದೆ. ಯಕ್ಷ ಶಿಕ್ಷಣ ಶಿಬಿರದ ಮೂಲಕ ಈ ಶ್ರೀಮಂತ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ಮಹತ್ವದ್ದಾಗಿದೆ. ವಾಸ್ತವಿಕವಾಗಿ ಜನಪದೀಯ, ಶಾಸ್ತ್ರೀಯ ಎನ್ನುವಂತಹದ್ದು ವಿರುದ್ಧ ನೆಲೆಗಳಲ್ಲ. ಎಲ್ಲಾ ಶಾಸ್ತ್ರೀಯ ಕಲೆಗಳು ಮೂಲತಃ ಜಾನಪದೀಯವಾಗಿರುತ್ತದೆ. ಜನಪದೀಯವಾಗಿರುವ ಕಲೆಗಳು ಮೌಖಿಕವಾಗಿದ್ದರೆ, ಶಾಸ್ತ್ರೀಯ ಕಲೆಗಳು ಲಿಖಿತವಾಗಿರುತ್ತದೆ. ಆದ್ದರಿಂದ ಯಕ್ಷಗಾನವನ್ನು ಎರಡು ನೆಲೆಯಲ್ಲೂ ವಿಸ್ತರಿಸಿ ನೋಡಬಹುದು. ಯಕ್ಷಗಾನವನ್ನೇ ಬದುಕನ್ನಾಗಿಸಿದ ಪುರುಷೋತ್ತಮ ಪೂಂಜ ಅವರು ಭಾಗವತನಾಗಿ, ಯಕ್ಷಗಾನ ಸಂಪನ್ಮೂಲ ವ್ಯಕ್ತಿಯಾಗಿ, ಅತ್ಯುತ್ತಮ ಪ್ರಸಂಗಕರ್ತನಾಗಿ, ಹಿಮ್ಮೇಳ ಸಂಘಟಕರಾಗಿ ಕೆಲಸ ಮಾಡಿ ಯಕ್ಷಗಾನವನ್ನೇ ಬದುಕನ್ನಾಗಿಸಿದ್ದರು. ಅವರ ಕನಸಿನಂತೆ ಅಂಬುರುಹ ಟ್ರಸ್ಟ್ ಮೂಲಕ ಯಕ್ಷಗಾನದ ಚಟುವಟಿಕೆ ನಡೆಯುತ್ತಿದೆ” ಎಂದರು.
ಮಂಜನಾಡಿಯ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದ ಅರ್ಚಕರದ ಸುಬ್ರಹ್ಮಣ್ಯ ಭಟ್ ಮಂಜನಾಡಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ. ವಿ. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಧನಂಜಯ ಕುಂಬ್ಳೆ, ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಮಂಜನಾಡಿಯ ಅಧ್ಯಕ್ಷೆ ಶೋಭಾ ಪುರುಷೋತ್ತಮ ಭಾಗವಹಿಸಿದ್ದರು. ಪೂಂಜ ಟ್ರಸ್ಟ್ ಇದರ ಉಪಾಧ್ಯಕ್ಷರಾದ ರಾಜಾರಾಮ್ ಹೊಳ್ಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ದೀವಿತ್ ಕೊಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.