ಮಂಗಳೂರು: ಕೊಂಕಣಿತ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರ 39ನೇ ವರ್ಷಾಚರಣೆ ಹಾಗೂ ತಿಂಗಳ ವೇದಿಕೆ ಸರಣಿಯ 23 ನೇ ವರ್ಷಾಚರಣೆಯ ಅಂಗವಾಗಿ ತನ್ನ ಕೊಂಕಣಿ ಕೆಲಸಗಳಿಗೆ ಜನರ ಸಹಕಾರ ಕೋರಿ `ಧಿಗೊ ಅಭಿಯಾನ್’ ಎಂಬ ಧನ ಸಂಗ್ರಹ ಅಭಿಯಾನಕ್ಕೆ ಚಾಲನೆ ಹಾಗೂ ತಿಂಗಳ ವೇದಿಕೆ ಸರಣಿಯಲ್ಲಿ 276 ನೇ ಕಾರ್ಯಕ್ರಮವಾಗಿ ಕಲಾಕುಲ್ ತಂಡದಿಂದ `ಆಯ್ರಿಕ್ ಸಯ್ರಿಕ್’ ನಾಟಕವು ದಿನಾಂಕ 01 ಡಿಸೆಂಬರ್ 2024 ರಂದು ಪ್ರದರ್ಶನಗೊಂಡಿತು.
ಶಕ್ತಿನಗರದ ಕಲಾಂಗಣದಲ್ಲಿ ಧಿಗೊ ಅಭಿಯಾನದ ಕರಪತ್ರ ಹಾಗೂ ಕೂಪನ್ ಗಳನ್ನು ಬಿಡುಗಡೆಗೊಳಿಸಿದ ಮಂಗಳೂರಿನ ಪ್ರಸಿದ್ಧ ಚಾರ್ಟರ್ಡ್ ಎಕೌಂಟೆಂಟ್ ಒಲ್ವಿನ್ ರೊಡ್ರಿಗಸ್ ಮಾತನಾಡಿ “ಮಾಂಡ್ ಸೊಭಾಣ್ ಕೊಂಕಣಿಗಾಗಿ ನಿರಂತರವಾಗಿ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ. ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗಾಗಿ ಬಹು ತ್ಯಾಗದ ಹಾಗೂ ಶ್ರಮದ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ನಾವೂ ಸ್ವಲ್ಪ ತ್ಯಾಗ ಮಾಡಿ ಅವರಿಗೆ ಸಹಕರಿಸೋಣ.’’ ಎಂದು ಕರೆ ಕೊಟ್ಟರು.
ತನ್ನ ಕೊಂಕ್ಣಿ ಚಟುವಟಿಕೆಗಳಿಗಾಗಿ ಈ ಧಿಗೊ (ಬೆಂಬಲ) ಅಭಿಯಾನವನ್ನು ಆರಂಭಿಸಿದ್ದು ಐದು ಸಾವಿರ ರೂಪಾಯಿಯ ಕೂಪನ್ ಕೊಂಡರೆ ಕಾಲು ಕೆಜಿ ಬಂಗಾರ ಗೆಲ್ಲುವ ಅವಕಾಶ ಲಭಿಸಲಿದೆ. ಹೆಚ್ಚು ಹೆಚ್ಚು ಕೂಪನ್ ಪಡೆದಷ್ಟು ಸಂಸ್ಥೆಗೆ ಬೆಂಬಲ ಮತ್ತು ಗೆಲ್ಲುವ ಅವಕಾಶ ಹೆಚ್ಚಲಿದೆ. ಇದರ ವಿಜೇತರ ಆಯ್ಕೆ ದಿನಾಂಕ 20 ಏಪ್ರಿಲ್ 2024ರಂದು ನಡೆಯಲಿದೆ.
ಇದೇ ಸಂದರ್ಭದಲ್ಲಿ ಸುಮೇಳ್ ತಂಡ ಹಾಡಿದ ಕ್ರಿಸ್ಮಸ್ ಕ್ಯಾರಲ್ಸ್ ಹಾಡುಗಳ ವಿಡಿಯೊವನ್ನು ಲೊಕಾರ್ಪಣೆ ಗೊಳಿಸಲಾಯಿತು. ಈ ವಿಡಿಯೊವನ್ನು ಅನ್ನು ವಿಕಾಸ್ ಲಸ್ರಾದೊ ನಿರ್ದೇಶಿಸಿದ್ದು, ಮಾಂಡ್ ಸೊಭಾಣ್ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
ಪ್ರಸಾರ ಭಾರತಿಯ ನಿವೃತ್ತ ಎ. ಡಿ. ಜಿ. ಸಾತುರ್ನಿನ್ ಮತಾಯಸ್ ಇವರು ಗಂಟೆ ಬಾರಿಸಿ ನಾಟಕಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಕೇರನ್ ಮಾಡ್ತಾ, ಎಲ್ರೊನ್ ರೊಡ್ರಿಗಸ್, ಅಜಯ್ ಡಿಸೋಜ ಉಪಸ್ಥಿತರಿದ್ದರು. ಅರುಣ್ ರಾಜ್ ರೊಡ್ರಿಗಸ್ ನಿರೂಪಿಸಿದರು.
ದಿ. ಲ್ಯಾನ್ಸಿ ಪಿಂಟೊ ನಾಯಕ್ ಬರೆದು, ಮನೀಷ್ ಪಿಂಟೊ ಎನ್. ಎಸ್. ಡಿ. ನಿರ್ದೇಶಿಸಿದ `ಆಯ್ರಿಕ್ ಸಯ್ರಿಕ್’ (ಆಯ್ರಿನಳಿಗೆ ಮದುವೆ ಪ್ರಸ್ತಾಪ) ನಾಟಕವನ್ನು ಕಲಾಕುಲ್ ವಿದ್ಯಾರ್ಥಿಗಳು ಅಭಿನಯಿಸಿದರು.