ಮಂಗಳೂರು : ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ ‘ನೃತ್ಯಲಹರಿ’ ಶಾಸ್ತ್ರೀಯ ನೃತ್ಯ ಮಹೋತ್ಸವದ ಸರಣಿ ಕಾರ್ಯಕ್ರಮ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಎಲ್. ಸಿ. ಆರ್. ಐ. ಸಭಾಂಗಣದಲ್ಲಿ ದಿನಾಂಕ 20 ಅಕ್ಟೋಬರ್ 2024 ರಂದು ಉದ್ಘಾಟನೆಗೊಂಡಿತು. ಕಲಾಪೋಷಕರಾದ ಡಾ. ಸಿ. ಕೆ. ಬಲ್ಲಾಳ್, ಶ್ರೀ ಪಿ. ನಿತ್ಯಾನಂದ ರಾವ್ ಹಾಗೂ ಹಿರಿಯ ನೃತ್ಯಗುರುಗಳಾದ ಉಳ್ಳಾಲ ಮೋಹನಕುಮಾರ್, ನೃತ್ಯಪಟು ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ನೃತ್ಯಲಹರಿ ಕಾರ್ಯಕ್ರಮದ ರೂಮಾರಿ ‘ನೃತ್ಯಾಂಗನ್’ ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ಉಪಸ್ಥಿತರಿದ್ದರು.
ಈ ಸರಣಿಯ ಪ್ರಥಮ ಕಾರ್ಯಕ್ರಮವಾಗಿ ರಾಧಿಕಾ ಶೆಟ್ಟಿಯವರು ಸಂಯೋಜಿಸಿ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ನೃತ್ಯ ನಿರ್ದೇಶನದಲ್ಲಿ ಅವಿಭಜಿತ ದ. ಕ. ಹಾಗೂ ಉಡುಪಿ ಜಿಲ್ಲೆಯ ಎಂಟು ನೃತ್ಯಗುರುಗಳ ಶಿಷ್ಯೆಯಂದಿರು ನೃತ್ಯಪ್ರದರ್ಶನವನ್ನು ನೀಡಿದರು. ಮೊದಲ ಪ್ರಸ್ತುತಿಯಲ್ಲಿ ಅಷ್ಟನಾಯಿಕಾ ಭಾವವನ್ನು ಎಂಟು ಕಲಾವಿದರು ಅಚ್ಚುಕಟ್ಟಾಗಿ ನಿರ್ವಹಿಸಿ, ಎರಡನೆಯದಾಗಿ ತಿಲ್ಲಾನವನ್ನು ಪ್ರದರ್ಶಿಸಲಾಯಿತು. ಮಯೂರದ ನಡೆಗಳನ್ನೇ ಮುಖ್ಯವಾಗಿ ನೃತ್ಯದಲ್ಲಿ ಅಳವಡಿಸಿಕೊಂಡಿದ್ದು, ನೃತ್ಯ ಸಂಯೋಜನೆ ಎಲ್ಲಾ ನೋಡುಗರ ಮೆಚ್ಚುಗೆಯನ್ನು ಪಡೆಯಿತು.
ದ್ವಿತೀಯ ಪ್ರಸ್ತುತಿಯಾಗಿ ಪ್ರದರ್ಶಿತಗೊಂಡಿದ್ದು ಬೆಂಗಳೂರಿನ ಪ್ರವೀಣ್ ಕುಮಾರ್ ನಿರ್ದೇಶನ ಹಾಗೂ ಪರಿಕಲ್ಪನೆಯಲ್ಲಿ ಮೂಡಿ ಬಂದ ತ್ಯಾಗರಾಜ ಹೃತ್ ಸದನ ನೃತ್ಯ ಪ್ರಸ್ತುತಿ. ‘ಶ್ರೀ ರಾಮ’ ನ ಕಥಾಹಂದರವನ್ನು ಸಂತ ತ್ಯಾಗರಾಜರ ಸಾಹಿತ್ಯ ಸಂಕುಲದ ಮೂಲಕ ಶಾಸ್ತ್ರೀಯ ನೃತ್ಯದ ಆಯಕಟ್ಟಿನಲ್ಲಿ ಪ್ರದರ್ಶಿಸಿರುವುದು ಅತ್ಯಂತ ಮನೋಜ್ಞವಾಗಿತ್ತು. ಸಾತ್ವಿಕ ಭಾವಾಭಿನಯ, ನಿಖರವಾದ ನೃತ್ಯದ ಹೆಜ್ಜೆಗಳು ಪ್ರೇಕ್ಷಕರಿಗೆ ರಾಮ ಚರಿತೆಯನ್ನು ಆಸ್ವಾದಿಸಲು ಅನುವುಮಾಡಿಕೊಟ್ಟಿತ್ತು. ಸಮರ್ಥವಾದ ಹಿಮ್ಮೇಳ ಕಲಾವಿರ ಸಾಥ್ ನೃತ್ಯ ಪ್ರಸ್ತುತಿಯ ಯಶಸ್ಸಿಗೆ ಸಹಕಾರಿಯಾಗಿತ್ತು. ಪ್ರವೀಣ್ ಕುಮಾರ್ ಇವರ ಜೊತೆ ಅವರ ಸಂಸ್ಥೆ ‘ಚಿತ್ಕಲಾ’ದ ಎಂಟು ಮಂದಿ ಕಲಾವಿದೆಯರು ಜೊತೆಯಾಗಿದ್ದರು. ಕಾರ್ಯಕ್ರಮದ ಬಳಿಕ ಎಲ್ಲಾ ಅತಿಥಿಗಳು ನೃತ್ಯ ಪ್ರದರ್ಶಿಸಿದ ಕಲಾವಿದರುಗಳಿಗೆ ಸ್ಮರಣಿಕೆಯನ್ನು ಇತ್ತು ಗೌರವಿಸಿದರು.
ಕೊನೆಯಲ್ಲಿ ಮಾತನಾಡಿದ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ “ಮಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ನೃತ್ಯ ಕಾರ್ಯಕ್ರಮಗಳು ಮತ್ತು ಬೆಳೆಯುತ್ತಿರುವ ನೃತ್ಯಕಲಾವಿದರುಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಉತ್ತಮವಾಗಿ ನೃತ್ಯ ಕಾರ್ಯಕ್ರಮಗಳು ಮೂಡಿಬಂದಿರುವುದಲ್ಲದೇ, ಶಾಸ್ತ್ರೀಯ ನೃತ್ಯ ಎಲ್ಲರ ಮನದಲ್ಲಿ ಹಸಿರಾಗಿರುವಂತೆ ಈ ಕಾರ್ಯಕ್ರಮ ಮಾಡಿದೆ.” ಎಂದರು. ಕಾರ್ಯಕ್ರಮ ಆಯೋಜಿಸಿದ ರಾಧಿಕಾ ಶೆಟ್ಟಿ ಇವರನ್ನು ಅಭಿನಂದಿಸಿ, ಇನ್ನಷ್ಟು ಕಾರ್ಯಕ್ರಮ ಗಳನ್ನು ಆಯೋಜಿಸಿ, ಇಳಿವಯಸ್ಸಲ್ಲಿ ತಾನು ಇನ್ನಷ್ಟು ಕಾರ್ಯಕ್ರಮವನ್ನು ನೋಡುವಂತಾಗಬೇಕು ಎಂದರು. ನೃತ್ಯ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿದರು.
ಚಿತ್ರ ಕೃಪೆ – ಸುಜಿತ್ ಎಸ್. ಕೆ.