ಮಂಗಳೂರು : ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಪುಸ್ತಕ ಪ್ರೇಮಿಗಳ ದಿನಾಚರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 14 ಫೆಬ್ರವರಿ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಮಂಗಳೂರು ಹಲವಾರು ವಿಷಯಗಳಿಗೆ ನಾಂದಿಯಾಗಿದೆ. ಇಂದು ನಡೆಯುತ್ತಿರುವ ಈ ಪುಸ್ತಕ ಪ್ರೇಮಿಗಳ ದಿನಾಚರಣೆ ಬೇರೆ ಎಲ್ಲಿಯೂ ನಡೆದ ಬಗ್ಗೆ ಮಾಹಿತಿ ಇಲ್ಲ, ಇದು ಇಲ್ಲಿಂದ ಆರಂಭಗೊಂಡು ವಿಶ್ವದಾದ್ಯಂತ ಹರಡಲಿ. ನಾನೂ ಒಬ್ಬ ಪುಸ್ತಕ ಪ್ರೇಮಿ. ಅದಕ್ಕಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಆದರೆ ನಾನು ಪ್ರೇಮದಿಂದ ಪುಸ್ತಕ ಓದು ಆರಂಭಿಸಿದವನಲ್ಲ, ಬದಲಾಗಿ ಒತ್ತಾಯದಿಂದ ಆರಂಭಿಸಿದವ. ಸೇನಾ ತರಬೇತಿಯಲ್ಲಿ ಇದ್ದಾಗ ಪುಸ್ತಕ ಓದಿ ಅದರ ವಿಮರ್ಶೆ ಬರೆಯುವುದು ತರಬೇತಿಯ ಭಾಗವಾಗಿತ್ತು. ಮುಂದೆ ಅದು ಪ್ರೀತಿಯಾಗಿ ಬದಲಾಯಿತು” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ ಆಳ್ವ ಮಾತನಾಡಿ “ರಂಗ ಸಂಗಾತಿಯ ಕಾರ್ಯಕ್ರಮಗಳು ತುಂಬಾ ವಿಭಿನ್ನವಾಗಿದ್ದು ಹೊಸತನದಿಂದ ಕೂಡಿರುತ್ತದೆ. ನಮ್ಮದು ಪ್ರೇಮಿಗಳ ದಿನ ಆಚರಿಸುವ ಸಂಸ್ಕೃತಿ ಅಲ್ಲ. ಬದಲಾಗಿ ಜ್ಞಾನಕ್ಕೆ ಗೌರವ ಕೊಡುವ ಸಂಸ್ಕೃತಿ, ಜ್ಞಾನವು ಪುಸ್ತಕದಿಂದ ಲಭಿಸುತ್ತದೆ. ಇಂದು ಇಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವ ಮೂಲಕ ರಂಗ ಸಂಗಾತಿ ಪ್ರತಿಷ್ಠಾನವು ಹೊಸ ಭಾಷ್ಯ ಬರೆದಿದೆ” ಎಂದರು.
ವೇದಿಕಕೆಯಲ್ಲಿ ಹಿರಿಯ ಸಾಹಿತಿ ಹಾಗೂ ವಿದ್ವಾಂಸರಾದ ಗಣೇಶ್ ಅಮೀನ್ ಸಂಕಮಾರ್ ಹಾಗೂ ಆಗರಿ ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಾಶಿಕ್ಷಕ ಹಾಗೂ ವ್ಯಂಗ್ಯಚಿತ್ರ ಕಲಾವಿದ ಜಾನ್ ಚಂದ್ರನ್ ಮತ್ತು ತನ್ನ ಚಹಾ ಅಂಗಡಿಯನ್ನು ಗ್ರಂಥಾಲಯವಾಗಿಸಿದ ಪುಸ್ತಕ ಪ್ರೇಮಿ ಉದ್ಯಾವರ ಸುರೇಂದ್ರ ಕೂಟ್ಯಾನ್ ಇವರನ್ನು ಸನ್ಮಾನಿಸಲಾಯುತು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಾಗೂ ಸಾಹಿತಿಯಾದ ರಂಗಸಂಗಾತಿಯ ಶಶಿರಾಜ್ ರಾವ್ ಕಾವೂರ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಮಂಜುಳಾ ಶೆಟ್ಟಿ ನಿರೂಪಿಸಿ, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಧನ್ಯವಾದ ಸಮರ್ಪಿಸಿದರು.