ಸಾಣೇಹಳ್ಳಿ: ಶಿವಸಂಚಾರ ನಾಟಕಗಳ ಉದ್ಘಾಟನೆ ಹಾಗೂ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮವು ದಿನಾಂಕ 04 ನವಂಬರ್ 2024ರಂದು ಸಾಣೆಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯಿತು.
ಉಘೇ ಮಹಾತ್ಮ ಮಲ್ಲಯ್ಯ…
ಮಾಯಗಾರ ಮಾದೇವನಿಗೆ ಶರಣು ಶರಣಯ್ಯ…
ಹೀಗೆ ಶಿವಕುಮಾರ ಕಲಾ ಸಂಘದ ವಿದ್ಯಾರ್ಥಿಗಳು ಕಂಸಾಳೆ ಹಾಡು ಜೊತೆಗೆ ನೃತ್ಯವಾಡುವಾಗ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ, ಸಾಹಿತಿ ಬಸವರಾಜ ಸಾದರ ಮಧ್ಯಕ್ಕೆ ಬಂದು ತಾಳವನ್ನು ಬಾರಿಸುತ್ತ ಕಲಾವಿದರಿಗೆ ಜೊತೆಯಾದರು. ಈಮೂಲಕ 27ನೇ ರಾಷ್ಟ್ರೀಯ ನಾಟಕೋತ್ಸವವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು “ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಆರಂಭಿಸಿದ ರಂಗ ಪರಂಪರೆಯನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮುಂದುವರೆಸಿಕೊಂಡು ಬಂದಿದ್ದಾರೆ. ನಮ್ಮೆಲ್ಲರ ಅಭಿರುಚಿಗಳನ್ನು ತಣಿಸುವ ಕಲೆ ರಂಗಭೂಮಿ. ಬಣ್ಣ, ಬೆಳಕು, ಬೆಡಗು, ಸಂಗೀತ, ಅಭಿನಯ ಒಳಗೊಂಡ ರಂಗಭೂಮಿಯಿಂದ ಸಾಣೇಹಳ್ಳಿ ಶ್ರೀಮಂತವಾಗಿದೆ. ಗ್ರೀಕ್ ಮಾದರಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಿತ್ಯ ಸಾವಿರಾರು ಪ್ರೇಕ್ಷಕರು ನಾಟಕಗಳನ್ನು ನೋಡುತ್ತಾರೆ.
ಕೇವಲ ವಚನ ಸಂಸ್ಕೃತಿ ಬಿಂಬಿಸುವ ನಾಟಕಗಳಲ್ಲದೆ ಬದುಕಿನ ವಿವಿಧ ಮಗ್ಗಲುಗಳನ್ನು ತೋರಿಸುವ ನಾಟಕಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಗಮನಾರ್ಹ.” ಎಂದು ಹೇಳಿದರು.
ಪಶು ಸಂಗೋಪನ ಇಲಾಖೆಯ ಆಯುಕ್ತರಾದ ಅಜಯ್ ನಾಗಭೂಷಣ ಮಾತನಾಡಿ “ಕಲೆ ಎಂದರೇನು, ಜೀವನ ಎಂದರೇನು, ಯಾವ ಉದ್ದೇಶಕ್ಕೆ ಬದುಕಬೇಕು ಎಂದು ನಮ್ಮ ಶಿಕ್ಷಣ ಹೇಳಿಕೊಡುತ್ತಿಲ್ಲ. ಆದರೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಬದುಕಿನ ಕುರಿತ ಶಿಕ್ಷಣವನ್ನು ರಂಗಭೂಮಿಯ ಮೂಲಕ ಹೇಳಿಕೊಡುತ್ತಿದ್ದಾರೆ. ಕಲೆ ಎನ್ನುವುದು ಇನ್ನೊಬ್ಬರಿಗೆ ಇಷ್ಟವಾಗುವ ಹಾಗೆ ಪ್ರದರ್ಶಿಸುವುದು. ಬಸವಣ್ಣನವರ ತತ್ವಾದರ್ಶಗಳನ್ನು ಸರಳವಾಗಿ ಸಾಣೇಹಳ್ಳಿ ಶ್ರೀಗಳು ಶಿಕ್ಷಣದ ಮೂಲಕ ಹೇಳಿಕೊಡುತ್ತಿದ್ದಾರೆ. ಇದು ಮಾದರಿಯಾಗಿದ್ದು, ಬೇರೆ ಕಡೆಯೂ ಮುಂದುವರೆಯಬೇಕು.” ಎಂದು ಸಲಹೆ ನೀಡಿದರು.