ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಯ ನೇತೃತ್ವದಲ್ಲಿ ‘ಕರ್ನಾಟಕ ಸಂಭ್ರಮ 50ರ ಸವಿನೆನಪು 2023-24’ನೇ ಕಲಾಪೋಷಕರ ಸಹಕಾರದೊಂದಿಗೆ 4ದಿನಗಳ ಕಾಲ ಹಮ್ಮಿಕೊಳ್ಳಲಾದ ‘ಸಿರಿಬಾಗಿಲು ಯಕ್ಷವೈಭವ’ದ ಉದ್ಘಾಟನಾ ಸಮಾರಂಭವು ದಿನಾಂಕ 17-07-2024 ರಂದು ನಡೆಯಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮಾವನ್ನು ದೀಪಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮಾತನಾಡಿ “ಸಿರಿಬಾಗಿಲು ಪ್ರತಿಷ್ಠಾನವು ಕಾಸರಗೋಡಿನಲ್ಲಿ ಯಕ್ಷಗಾನ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗೆ ನೀಡುತ್ತಿರುವ ಕೊಡುಗೆ ಅಪಾರವಾದುದು. ಮೂವತ್ತಕ್ಕೂ ಹೆಚ್ಚು ಹವ್ಯಾಸಿ ತಂಡಗಳಿಗೆ ಯಕ್ಷಗಾನ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಅತ್ಯುತ್ತಮ ಕೆಲಸ.” ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ “ಕನ್ನಡದ ಶುದ್ದಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದು. ನಮ್ಮ ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಯಕ್ಷಗಾನ ನಿರ್ವಹಿಸುತ್ತಿದೆ. ಗಡಿನಾಡು ಕಾಸರಗೋಡಿನಲ್ಲಿ ಮಲೆಯಾಳಿ ಸೆರಗಲ್ಲಿ ಕನ್ನಡವನ್ನು ಉಳಿಸುವ ಹಾಗೂ ಯಕ್ಷಗಾನ ಬೆಳೆಸುವಲ್ಲಿ ಸಿರಿಬಾಗಿಲು ಪ್ರತಿಷ್ಠಾನವು ದೊಡ್ಡ ಸಾಧನೆ ಮಾಡುತ್ತಿದೆ.” ಎಂದು ನುಡಿದರು.
ಕಲಾಪೋಷಕ ಹಾಗೂ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಪ್ರತಿಷ್ಠಾನದ ಗೌರವ ಸದಸ್ಯತ್ವವನ್ನು ಶ್ರೀಗಳ ಕೈಯಿಂದ ಸ್ವೀಕರಿಸಿ ಮಾತನಾಡಿ “ರಾಮಕೃಷ್ಣ ಮಯ್ಯರ ಕಾರ್ಯಕ್ಕೆ ಸಮಾಜವು ತನು ಮನ ಧನಗಳಿಂದ ಪ್ರೋತ್ಸಾಹಿಸಬೇಕಿದೆ.” ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು.
ಸಿರಿಬಾಗಿಲು ಪ್ರತಿಷ್ಠಾನವು ಮುಂದಿನ ಬೆಳವಣಿಗೆಗಾಗಿ ಸದಸ್ಯತ್ವ ನೋಂದಾವಣಾ ಅಭಿಯಾನವನ್ನು ಆರಂಭಿಸಿದೆ.
ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ, ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿ,ಪ್ರಸನ್ನ ಕಾರಂತ ದೇಶಮಂಗಲ ವಂದಿಸಿದರು.
ಸಿರಿಬಾಗಿಲಿನಲ್ಲಿ ಇತ್ತೀಚೆಗೆ ನಿರ್ಮಿಸಲಾದ ಯಕ್ಷಗಾನ ವಸ್ತುಸಂಗ್ರಹಾಲಯವನ್ನು ವೀಕ್ಷಿಸಿದ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.