ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-97’ ಕಾರ್ಯಕ್ರಮದಡಿಯಲ್ಲಿ ತೆಂಕು ತಿಟ್ಟು ಭಾಗವತಿಕೆ ತರಗತಿ ಉದ್ಘಾಟನಾ ಸಮಾರಂಭವು ದಿನಾಂಕ 11 ಜನವರಿ 2025ರಂದು ನಡೆಯಿತು. ಸಮಾರಂಭದಲ್ಲಿ ಭಾಗವತಿಕೆ ತರಗತಿಯನ್ನು ಉದ್ಘಾಟಿಸಿದ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಮಾತನಾಡಿ “ಕರಾವಳಿಯ ಅಭಿಮಾನದ ಕಲಾಸಂಸ್ಥೆಯಾದ ಯಶಸ್ವೀ ಕಲಾವೃಂದದ ಆಶ್ರಯದಲ್ಲಿ ಇನ್ನು ಮುಂದೆ ಬಡಗಿನ ಹಿಮ್ಮೇಳದೊಂದಿಗೆ ತೆಂಕುತಿಟ್ಟು ಹಿಮ್ಮೇಳ ತರಗತಿಯೂ ನಡೆಯುತ್ತಿರುವುದು ಅತ್ಯಂತ ಸಂತಸ ತಂದಿದೆ. ತಾಳ ಮದ್ದಳೆಯೊಂದಿಗೆ ಜಾಗಟೆಯ ಮಧುರ ಮೈತ್ರಿ ಬಯಸುವ ಕಲಾಸಕ್ತರಿಗೆ ಬೆಳ್ಳಿ ಹಬ್ಬದ ಸಂಸ್ಥೆ ನೀಡಿದ ಚಿನ್ನದ ಅವಕಾಶವಿದು. ಒಂದೇ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ಕಲಾಮಾತೆಯ ಯುಗ್ಮ ನಯನಗಳಂತಿರುವ ಎರಡು ತಿಟ್ಟುಗಳ ಸಶಕ್ತ ಶಿಕ್ಷಣ ಸಿಗುವುದೆಂದರೆ ನಿಜಕ್ಕೂ ಕಲಾಭ್ಯಾಸಿಗಳ ಭಾಗ್ಯವೆನ್ನಬೇಕು. ಯಶಸ್ವೀ ಕಲಾವೃಂದದ ಕಲಾತ್ಮಕ ಯೋಚನೆಯ ಮಹತ್ವಪೂರ್ಣ ನಡೆಯಿದು. ತೆಂಕು ತಿಟ್ಟಿನ ಅಗ್ರಮಾನ್ಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಗುರುತನದಲ್ಲಿ ತರಗತಿಗಳು ನಡೆಯುವ ಸಂಗತಿ ಪ್ರಶಂಸನೀಯ.” ಎಂದರು.
ಮಾಂಬಾಡಿಯವರನ್ನು ಅಭಿನಂದಿಸಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಅನೇಕ ಪ್ರಸಿದ್ಧ ಭಾಗವತರ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್. ಲವಲವಿಕೆಯಿಂದ ಭಾಗವತಿಕೆಯ ಮೂಲ ಪಾಠವನ್ನು ಮಾಡುತ್ತಾ ಗಾನಾಮೃತದ ಮೂಲ ಸತ್ವವನ್ನು ವಿವರಿಸಿ ಪ್ರಸಿದ್ಧಿ ಹೊಂದಿದ ಭಾಗವತರು. 75ರ ಇಳಿ ವಯಸ್ಸಿನಲ್ಲಿಯೂ ಅನೇಕ ಶಿಷ್ಯರಿಗೆ ಶಿಕ್ಷಕನಾಗಿ ಮುಂದುವರಿಯುತ್ತಿರುವುದು ಶ್ಲಾಘನೀಯ. ಈ ಅನುಭವೀ ಹಿರಿಯರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಶ್ರೇಷ್ಠ ಪ್ರಶಸ್ತಿಯಾದ ‘ಪಾರ್ಥಿಸುಬ್ಬ ಪ್ರಶಸ್ತಿ’ ಲಭಿಸಿರುವುದು ಅನೇಕರ ಪ್ರಶಂಸೆಗೆ ಪಾತ್ರವಾಗಿದೆ ಹಾಗೂ ಅಕಾಡೆಮಿಯ ಪ್ರಶಸ್ತಿ ಗೌರವ ಇನ್ನಷ್ಟು ಹೆಚ್ಚಾಗಿದೆ.” ಎಂದರು.ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ‘ಶ್ವೇತಯಾನ’ದ ಕಾರ್ಯಾಧ್ಯಕ್ಷ ಗೋಪಾಲ ಪೂಜಾರಿ ಕೊಮೆ, ಪವನ್ ಆಚಾರ್, ಕಾರ್ಯದರ್ಶಿ ವೆಂಕಟೇಶ ವೈದ್ಯ ಹಾಗೂ ಮೋಹನಚಂದ್ರ ಪಂಜಿಗಾರು ಉಪಸ್ಥಿತರಿದ್ದರು. ಗುರು ಲಂಬೋದರ ಹೆಗಡೆ ಪ್ರಾಸ್ತಾವಿಕ ಮಾತನಾಡಿ ಪೂಜಾ ಆಚಾರ್ ಹಾಗೂ ಪಂಚಮಿ ವೈದ್ಯ ಕಾರ್ಯಕ್ರಮ ನಿರೂಪಿಸಿದರು.