ಶಿರ್ವ: ಕಟಪಾಡಿ ವನಸುಮ ವೇದಿಕೆ ಹಾಗೂ ವನಸುಮ ಟ್ರಸ್ಟ್ ಇವರು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ ‘ವನಸುಮ ರಂಗೋತ್ಸವ’ದ ಉದ್ಘಾಟನಾ ಸಮಾರಂಭವು ದಿನಾಂಕ 06 ಏಪ್ರಿಲ್ 2025ರಂದು ಕಟಪಾಡಿಯ ಎಸ್. ವಿ. ಎಸ್. ಹೈಸ್ಕೂಲ್ ಇದರ ಒಳಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ “ನಾಟಕಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ಗುಣ ಹೊಂದಿರುತ್ತವೆ. ಒಂದು ನಾಟಕವನ್ನು ಮುರಿದುಕಟ್ಟುವ ಮೂಲಕ ಪ್ರದರ್ಶನದಲ್ಲಿ ಸಮಕಾಲೀನತೆಯನ್ನು ತರಲು ಸಾಧ್ಯವಿದೆ. ಇತರ ಪ್ರದರ್ಶನ ಕಲೆಗಳಿಗೆ ಹೋಲಿಸಿದರೆ ನಾಟಕಗಳು ಸಮಾಜದ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತವೆ” ಎಂದು ಹೇಳಿದರು. ಚಲನಚಿತ್ರ ನಟ ಪ್ರಕಾಶ್ ತುಮಿನಾಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯದರ್ಶಿ ವಿನಯ್ ಮುಳ್ಳೂರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಂಗನಟ ಹಾಗೂ ನಿರ್ದೇಶಕರಾದ ಪ್ರದೀಪ್ ಚಂದ್ರ ಕುತ್ಪಾಡಿ ಇವರಿಗೆ ‘ವನಸುಮ ರಂಗಸಮ್ಮಾನ್’ ಪ್ರದಾನ ಮಾಡಲಾಯಿತು. ಶ್ರೀಕಾಂತ್ ಬಿ. ಆಚಾರ್ಯ ಕಾಪು ಹಾಗೂ ಪಲ್ಲವಿ ಕೊಡಗು ಇವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಬಾಸುಮ ಕೊಡಗು ವಿರಚಿತ ‘ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಲಾಯಿತು.
ವನಸುಮ ಸಂಸ್ಥೆಯ ಅಧ್ಯಕ್ಷರಾದ ಬಾಸುಮ ಕೊಡಗು ಸ್ವಾಗತಿಸಿ, ಕಾವ್ಯವಾಣಿ ಕೊಡಗು ಸನ್ಮಾನ ಪತ್ರ ವಾಚಿಸಿ, ಸೋನಿ ಪ್ರಭುಧನ್ ನಿರೂಪಿಸಿ, ರಮ್ಯಾ ಕಾಮತ್ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಸುರಭಿ ಬೈಂದೂರು ತಂಡದಿಂದ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಡಾ. ಕೆ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಚೋಮನ ದುಡಿ’ ನಾಟಕ ಪ್ರದರ್ಶನಗೊಂಡಿತು.
1 Comment
Good initiative