ಹರೇಕಳ : ಹರೇಕಳ ಶ್ರೀರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಯಕ್ಷದ್ರುವ ಪಟ್ಲ ಪೌಂಡೇಶನ್ ವತಿಯಿಂದ ಉಚಿತ ಯಕ್ಷದ್ರುವ ಯಕ್ಷ ಶಿಕ್ಷಣ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 09 ಜುಲೈ 2025ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಡಿಪು ಘಟಕದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರು ಮಾತನಾಡಿ “ಇಂದು ಮಕ್ಕಳು ಮೊಬೈಲ್ ದಾಸರಾಗಿದ್ದಾರೆ ಕಾರಣ ಕೇವಲ ಪಠ್ಯಕ್ಕೆ ಸೀಮಿತವಾದ ಶಿಕ್ಷಣ. ಮಕ್ಕಳಿಗೆ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡಿದಾಗ ಸಮಯವನ್ನು ಕೂಡ ಸದುಪಯೋಗ ಪಡೆಸಿಕೊಳ್ಳುತ್ತಾರೆ. ಇದರಿಂದ ಮನೆಯಲ್ಲಿ ಮೊಬೈಲ್ ಮುಕ್ತ ವಾತಾವರಣ ಸೃಷ್ಟಿಯಾಗುತ್ತದೆ. ಯಕ್ಷಗಾನ ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಭಿವೃದ್ಧಿಯಾಗುವುದರೊಂದಿಗೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ” ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ವಾಸುದೇವ ಐತಾಳ್ ಮಾತನಾಡಿ “ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇದರಿಂದ ಪಠ್ಯಕ್ಕೂ ಪ್ರಯೋಜನ ಆಗುತ್ತದೆ. ಮಾತ್ರವಲ್ಲದೇ ವಿದ್ಯಾರ್ಥಿಗಳಲ್ಲಿ ನಾಟ್ಯ, ಮಾತುಗಾರಿಕೆ, ಸೃಜನಶೀಲತೆ, ಮುಂತಾದವುಗಳು ಅಭಿವೃದ್ಧಿ ಹೊಂದುವುದರೊಂದಿಗೆ ಸಂಸ್ಕಾರವೂ ಬೆಳೆಯುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಂಟಿ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಕಡೆಂಜ ಸೋಮಶೇಖರ್ ಚೌಟ ವಹಿಸಿದ್ದರು. ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಗುರುಗಳಾದ ಅಶ್ವಥ್ ಮಂಜಿನಾಡಿ ಯಕ್ಷಗಾನ ತರಬೇತಿಯನ್ನು ನಡೆಸಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಪ್ರಸ್ತಾವನೆ ಗೈದು, ಶಿಕ್ಷಕರಾದ ಕೃಷ್ಣ ಶಾಸ್ತ್ರೀ ಅವರು ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ರವಿಶಂಕರ್ ಧನ್ಯವಾದವಿತ್ತರು. ಶಿಕ್ಷಕರುಗಳಾದ ಕುಮುದಾದೇವಿ, ಶಿವಕುಮಾರ್ ಸಹಕರಿಸಿದರು.