ಉಡುಪಿ : ಯಕ್ಷ ಶಿಕ್ಷಣ ಟ್ರಸ್ಟ್ ಪ್ರಾಯೋಜಿತ ಈ ಸಾಲಿನ ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು ದಿನಾಂಕ 16ಜುಲೈ 2025ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ-ಮತ್ಯಾಡಿ ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶಾಲೆಯ ಪ್ರಾಂಶುಪಾಲರಾದ ಶೈಲಾ. ಎಂ. ಶೇಟ್ ಮಾತನಾಡಿ “ಸರ್ವಾಂಗಸುಂದರ ಯಕ್ಷಗಾನ ಕಲೆಯ ಅಭ್ಯಾಸದಿಂದ ನಮ್ಮ ಬದುಕು ಸರ್ವಾಂಗ ಸುಂದರವಾಗುತ್ತದೆ. ಯಕ್ಷಗಾನ ಶಿಕ್ಷಣ ಎಳವೆಯಲ್ಲಿಯೇ ಸಿಗುವುದರಿಂದ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಅಂಕುರಿಸುತ್ತದೆ” ಎಂದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಣೇಶ್ ಮಾತನಾಡಿ ಯೋಗ್ಯ ಗುರುಗಳನ್ನು ನಮ್ಮ ಶಾಲೆಗೆ ಒದಗಿಸಿದ ಟ್ರಸ್ಟ್‌ನ್ನು ಶ್ಲಾಘಿಸಿದರು. ಯಕ್ಷ ಗುರು-ಭಾಗವತರಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು ಯಕ್ಷಗಾನ ಕಲೆಯ ಶ್ರೇಷ್ಟತೆ, ಯಕ್ಷ ಶಿಕ್ಷಣದ ಮಹತ್ವಿಕೆ, ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ಹಾಗೂ ಕಲಾರಂಗದ ಕಾರ್ಯವೈಖರಿಯನ್ನು ಬಣ್ಣಿಸಿದರು.
ಚಿತ್ರ ಕಲಾ ಶಿಕ್ಷಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸುಮಾರು ಐವತ್ತು ವಿದ್ಯಾರ್ಥಿಗಳು ಈ ಸಲದ ಯಕ್ಷ ಶಿಕ್ಷಣದ ಕಲಿಕಾರ್ಥಿಗಳಾದರು.

