ಕೋಟ : ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಿದ ಯಕ್ಷ ತ್ರಿವಳಿ’ ಯಕ್ಷೋತ್ಸವದ ಉದ್ಘಾಟನಾ ಸಮಾರಂಭವು ದಿನಾಂಕ 17 ಏಪ್ರಿಲ್ 2025ರಂದು ಕೋಟ ಮೂರ್ಕೈಯ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂದಾಪುರ ವಿಧಾನ ಸಭಾ ಶಾಸಕರಾದ ಕಿರಣ ಕುಮಾರ ಕೊಡ್ಗಿ ಮಾತನಾಡಿ “ಯಕ್ಷಗಾನ ಕಲೆ ಉಳಿದು ಬೆಳೆಯುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಸರಕಾರದಿಂದ ಬರುವ ಎಲ್ಲಾ ರೀತಿಯ ಅನುದಾನದ ಜೊತೆಗೆ ಈ ಭಾಗದ ಜನ ಪ್ರತಿನಿಧಿಗಳಾಗಿ ನಮ್ಮಿಂದ ಮಾಡಬಹುದಾದ ಹೆಚ್ಚಿನ ನೆರವನ್ನು ನೀಡುವಲ್ಲಿ ನಾವು ಸದಾ ಸಿದ್ಧರು. ಶ್ರೀಧರ ಹಂದೆ ಮತ್ತು ಕಾರ್ಕಡ ಶ್ರೀನಿವಾಸ ಉಡುಪರ ಸಾಲಿಗ್ರಾಮ ಮಕ್ಕಳ ಮೇಳ ಐವತ್ತು ವರ್ಷಗಳ ಸಾರ್ಥಕ ಇತಿಹಾಸವನ್ನು ಸೃಷ್ಟಿಸಿರುವುದು ಅಭಿನಂದನೀಯ. ಈ ಕಲೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಯಕ್ಷಗಾನ ಅಕಾಡೆಮಿ ಹಾಗೂ ಉಡುಪಿ ಕಲಾರಂಗದ ಚಟುವಟಿಕೆಗಳು ಸ್ಮರಣಿಯ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನದ ಪೌರಾಣಿಕ ಜ್ಞಾನವು ಮಕ್ಕಳಿಗೆ ಬದುಕಿನ ಸಂಸ್ಕಾರವನ್ನು ಕಳಿಸಿಕೊಡುತ್ತದೆ. ಸಾಲಿಗ್ರಾಮ ಮಕ್ಕಳ ಮೇಳ, ಯಕ್ಷ ಶಿಕ್ಷಣ ಟ್ರಸ್ಟ್ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿಕೊಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ ಕುಂದರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಕೋಟತಟ್ಟು ಪಂಚಾಯತ್ ಇದರ ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆ, ಅಧ್ಯಕ್ಷರಾದ ಬಲರಾಮ ಕಲ್ಕೂರ, ಉಪಾಧ್ಯಕ್ಷರಾದ ಜನಾರ್ದನ ಹಂದೆ, ಟ್ರಸ್ಟಿ ಶ್ರೀಕಾಂತ ಉಡುಪ ಉಪಸ್ಥಿತರಿದ್ದರು. ಇದೇ ಸಂದರ್ಭ ಮಕ್ಕಳ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಗುರು ದೇವದಾಸ ಕೂಡ್ಲಿ ಇವರಿಗೆ ‘ಸುವರ್ಣ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಅಕಾಡೆಮಿಯ ರಿಜಿಸ್ಟ್ರಾರ್ ನಮೃತ ಎನ್ ಸ್ವಾಗತಿಸಿ, ಅಕಾಡೆಮಿಯ ಸದಸ್ಯ ಸಂಚಾಲಕ ರಾಘವ ಎಚ್. ಪ್ರಸ್ಥಾವಿಕವಾಗಿ ಮಾತನಾಡಿ, ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿ, ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಲಾ ಪೀಠ ಕೋಟ ತಂಡದಿಂದ ನರಸಿಂಹ ತುಂಗ ಅವರ ನಿರ್ದೇಶನದಲ್ಲಿ ‘ಮೈಂದ ದ್ವಿವಿಧ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
Subscribe to Updates
Get the latest creative news from FooBar about art, design and business.