ಮಂಗಳೂರು : ಅಲೆವೂರಾಯ ಪ್ರತಿಷ್ಠಾನದ ಎಂಟನೇ ವರ್ಷದ ‘ಯಕ್ಷ ತ್ರಿವೇಣಿ’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 22 ಫೆಬ್ರವರಿ 2025 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ದೇಶದ ಹಲವಾರು ಕಲೆಗಳಲ್ಲಿ ಯಕ್ಷಗಾನವು ಅಗ್ರಸ್ಥಾನವನ್ನು ಪಡೆದಿದೆ. ನೃತ್ಯ, ಸಾಹಿತ್ಯ ಹಾಗೂ ಹಿಮ್ಮೇಳಗಳಿಂದ ಶ್ರೀಮಂತವಾಗಿರುವ ಈ ಕಲೆಯು ವಿಶ್ವದಲ್ಲಿಯೇ ಸಶಕ್ತ – ಸಧೃಡ ಕಲೆಯಾಗಿದೆ. ಬೇರೆ ರಾಜ್ಯಗಳಲ್ಲಿರುವ ಕಲೆಗಳೂ ಹೆಚ್ಚು ಹೆಚ್ಚಾಗಿ ಯಕ್ಷಗಾನಕ್ಕೆ ಸಮೀಪವೇ ಇವೆ. ರಾಜಕಲೆಯಾದ ಇದನ್ನು ರಾಜಾಶ್ರಯದಿಂದ ಬೆಳೆಸೋಣ” ಎಂದು ಹೇಳಿದರು.
ಮಂಗಳಾದೇವಿ ದೇವಳದ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ನಮ್ಮಂತಹಾ ದೇವಸ್ಥಾನಗಳಲ್ಲಿ ಇಂತಹಾ ಕಲಾಪ್ರಕಾರಗಳ ಪ್ರದರ್ಶನಕ್ಕೆ ಖಂಡಿತಾ ಅವಕಾಶವಿದೆ. ಅಲೆವೂರಾಯ ಸಹೋದರರ ಈ ಪ್ರಯತ್ನಕ್ಕೆ ಶುಭವಾಗಲಿ” ಎಂದು ಶುಭಾಸಂಶನೆಗೈದರು.
ಅಲೆವೂರಾಯ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸದ ಉಪನ್ಯಾಸಕ, ಹಾಗೂ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀ ಸುಜಯೀಂದ್ರ ಹಂದೆ ಮಾತನಾಡಿ ’ನಮ್ಮ ಮಕ್ಕಳ ಮೇಳದಂತೆಯೇ ಇಲ್ಲಿಯೂ ಇದೆ. ಇದನ್ನು ನಾವು ದೇವರ ಕಲೆ ಎಂದು ಆರಾಧಿಸುತ್ತೇವೆ. ಹಾಗಾಗಿ ಈ ಸನ್ಮಾನ ನನಗೆ ದೊರೆತಿರುವುದು ತುಂಬಾ ಸಂತಸದ ವಿಷಯ” ಎಂದರು.
ಕರ್ಣಾಟಕ ಬ್ಯಾಂಕ್ ಇದರ ನಿವೃತ್ತ ಉದ್ಯೋಗಿ ಶ್ರೀ ಜನಾರ್ಧನ ಹಂದೆ,ಉಪನ್ಯಾಸಕ ಶ್ರೀ ಬಾಲಕೃಷ್ಣ ಶೆಟ್ಟಿ, ಹಿಮ್ಮೇಳ ಕಲಾವಿದ ವೇಣುಗೋಪಾಲ ಮಾಂಬಾಡಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಪ್ರತಿಷ್ಠಾನದ ವಿಶ್ವಸ್ಥರಾದ ವರ್ಕಾಡಿ ರವಿ ಅಲೆವೂರಾಯ ಸ್ವಾಗತ ಹಾಗೂ ಪ್ರಸ್ತಾವನೆ ಮಾಡಿದರು. ನಿರೂಪಕ ಸುಧಾಕರ ರಾವ್ ಪೇಜಾವರ ನಿರೂಪಿಸಿ, ಮಧುಸೂದನ ಅಲೆವೂರಾಯ ವರ್ಕಾಡಿ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಭೂಭಾರ ಹರಣ’ ಯಕ್ಷಗಾನ ಬಯಲಾಟ ಜರಗಿತು.