ಮುಡಿಪು : ಮಂಗಳೂರು ವಿಶ್ವ ವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆದ 2023-24ನೇ ಸಾಲಿನ ಯಕ್ಷಮಂಗಳ ತಂಡದ ಯಕ್ಷನಾಟ್ಯ ತರಬೇತಿಯನ್ನು ದಿನಾಂಕ 12-12-2023ರಂದು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಗಣೇಶ್ ಸಂಜೀವ ಇವರು ಉದ್ಘಾಟಿಸಿ “ಶಿಕ್ಷಣದೊಂದಿಗೆ ಯಕ್ಷಗಾನದ ನಾಟ್ಯ ಮತ್ತು ಹಿಮ್ಮೇಳದ ಕಲಿಕೆ ವಿದ್ಯಾರ್ಥಿಗಳಲ್ಲಿ ಕಲೆಯ ಬಗೆಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ. ಹವ್ಯಾಸವಾಗಿ ಕಲೆಯೊಂದನ್ನು ರೂಢಿಸಿಕೊಂಡರೆ ಕಲಾವಿದನಾಗದಿದ್ದರೂ ಉತ್ತಮ ಪ್ರೇಕ್ಷಕರಾಗುವುದಂತೂ ಸಾಧ್ಯ. ಯಕ್ಷಗಾನ ಕಲೆಯನ್ನು ಆಸ್ವಾದಿಸುವುದಕ್ಕೂ ಯುವ ತಲೆಮಾರಿಗೆ ತರಬೇತು ನೀಡುವ ಅಗತ್ಯವಿದೆ. ಉತ್ತಮ ಪ್ರೇಕ್ಷಕವರ್ಗ ನಿರ್ಮಾಣ ಇಂದಿನ ಅಗತ್ಯ. ವಿವಿಯ ಯಕ್ಷಗಾನ ಕೇಂದ್ರವು ಹಲವು ಕಾರ್ಯಯೋಜನೆಗಳೊಂದಿಗೆ ತರಬೇತಿ ಚಟುವಟಿಕೆಗಳನ್ನು ಆಯೋಜಿಸಿ ಯಕ್ಷ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ. ಇಲ್ಲಿ ಕಲಿತ ವಿದ್ಯಾರ್ಥಿಗಳ ಮೂಲಕ ಹೊಸ ಯಕ್ಷ ಪ್ರಯೋಗಗಳನ್ನು ರೂಪಿಸಬೇಕು” ಎಂದು ಹೇಳಿದರು.
ಯಕ್ಷಗುರು ದೀವಿತ್ ಶ್ರೀಧರ್ ಕೋಟ್ಯಾನ್ ಅವರು ಮಾತನಾಡಿ “ಜಾನಪದ ಕಲೆಯಾದ ಯಕ್ಷಗಾನವು ಈಗ ಶಾಸ್ತ್ರೀಯ ಚೌಕಟ್ಟನ್ನು ಹೊಂದುತ್ತಿರುವುದು ಕಲೆ ಬೆಳೆಯುತ್ತಿರುವುದರ ಲಕ್ಷಣ. ಗಾನ ನೃತ್ಯ, ಅಭಿನಯ, ಮಾತು, ಬಣ್ಣ, ವರ್ಣರಂಜಿತ ಉಡುಗೆ ತೊಡುಗೆಗಳ ಮೂಲಕ ರೂಪುಗೊಂಡಿರುವ ಯಕ್ಷಗಾನಕ್ಕೆ ಉಜ್ವಲ ಭವಿಷ್ಯವಿದೆ” ಎಂದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಡಾ. ಸತೀಶ್ ಕೊಣಾಜೆ ವಂದಿಸಿ, ಉಪನ್ಯಾಸಕಿ ಕಾಜಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ಗುರುಗಳಾದ ದೀವಿತ್ ಶ್ರೀಧರ್ ಕೋಟ್ಯಾನ್ ಅವರು ಹೆಜ್ಜೆಗಾರಿಕೆಯ ಬಗ್ಗೆ ತರಬೇತಿ ನೀಡಿದರು.
ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನಕ್ಕೆ ಸಂಬಂಧಿಸಿದ ಅಧ್ಯಯನ, ಕಾರ್ಯಾಗಾರ, ವಿಚಾರಸಂಕಿರಣ ಕಮ್ಮಟ, ಪ್ರಕಟನೆ, ಪ್ರಾತ್ಯಕ್ಷಿಕೆ, ಪ್ರಚಾರೋಪನ್ಯಾಸ, ದಾಖಲೀಕರಣ ಮೊದಲಾದ ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ಯಕ್ಷತರಬೇತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಯಕ್ಷಗಾನಾಸಕ್ತಿಯನ್ನು ಬೆಳೆಸುವಂತಹ ಕಾರ್ಯವನ್ನು ಕಳೆದ ಹಲವು ವರ್ಷಗಳಿಂದ ನಿರ್ವಹಿಸುತ್ತಿದೆ.