ಕುಂದಾಪುರ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಸಂಸ್ಥೆಯ ಐವತ್ತರ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಮ್ಮಿಕೊಂಡ ‘ಯಕ್ಷ ಸಪ್ತೋತ್ಸವ – 2024’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 01-01-2024 ರಂದು ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಿತು.
ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ. ಕುಂದರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಇಂದಿನ ಯುವ ಪೀಳಿಗೆ ಹಿರಿಯರನ್ನು ಗೌರವಿಸುವಂತಾಗಲು, ತಂದೆ-ತಾಯಿಯರ ಮಾತುಗಳನ್ನು ಪಾಲಿಸುವಂತಾಗಲು ರಾಮಾಯಣದ ನೈತಿಕ ಮೌಲ್ಯಗಳನ್ನು ಅವರಿಗೆ ದಾಟಿಸುವ ಕೆಲಸವಾಗಬೇಕು. ಯಕ್ಷಗಾನದಿಂದ ಈ ಕಾರ್ಯವನ್ನು ಮಾಡಲು ಸಾಧ್ಯವಿದೆ. ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು, ವೃದ್ಧ ತಂದೆತಾಯಿ ವೃದ್ಧಾಶ್ರಮಗಳನ್ನು ಸೇರುತ್ತಿರುವುದನ್ನು ಕಂಡಾಗ ದಿಗಿಲು ಹುಟ್ಟುತ್ತದೆ. ದುಡ್ಡಿನಿಂದ ಮಾನವ ಸಂಬಂಧಗಳು ಬಲಗೊಳ್ಳಲಾರವು ಎಂಬುದನ್ನು ಈ ಘಟನೆಗಳು ಸಾಬೀತುಪಡಿಸುತ್ತವೆ. ಇಂದಿನ ಯುವ ಜನರಿಗೆ ವೃದ್ಧರೇಕೆ ಬೇಡವಾಗಿದ್ಧಾರೆ ಎಂಬುದನ್ನು ವಿಮರ್ಶಿಸಿದಾಗ, ಅವರಲ್ಲಿ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳ ಅಧಃಪತನ ಕಂಡು ಬರುತ್ತಿದೆ. ಈ ಸಮಸ್ಯೆಗೆ ಮರ್ಯಾದಾ ಪುರುಷೋತ್ತಮನ ಆದರ್ಶಗಳನ್ನು ಸಾರುವ ರಾಮಾಯಣ ರಾಮಬಾಣವಾಗಬಲ್ಲದು. ಆದ್ದರಿಂದ ಮಕ್ಕಳನ್ನು ಯಕ್ಷಗಾನ ಕಲಿಕೆಗೆ ಸೇರಿಸಿ, ಅವರನ್ನು ಯಕ್ಷಗಾನ ಪ್ರದರ್ಶನಕ್ಕೆ ಕರೆದುಕೊಂಡು ಬಂದು ಈ ಮಣ್ಣಿನ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡಲು ಹೆತ್ತವರು ಮುಂದಾಗಬೇಕು. ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡಿದ ಮಕ್ಕಳು ಶುದ್ಧ ಕನ್ನಡ ಭಾಷೆ ಮಾತನಾಡುವುದಲ್ಲದೆ, ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿರುವುದನ್ನು ನಾವು ಕಂಡಿದ್ದೇವೆ. ಯಕ್ಷಗಾನ ಕಲಾಕೇಂದ್ರ ಈ ಬಾರಿಯ ಯಕ್ಷ ಸಪ್ತೋತ್ಸವದಲ್ಲಿ ‘ರಾಮಾಯಣದ ಧರ್ಮ ಸೂಕ್ಷ್ಮಾಂಶಗಳು’ ಎಂಬ ವಿಷಯದಲ್ಲಿ ಯಕ್ಷಗಾನವನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ಇದನ್ನು ಸಮಾಜ ಸದುಪಯೋಗ ಪಡಿಸಿಕೊಳ್ಳಬೇಕು.” ಎಂದು ಅವರು ಮನವಿ ಮಾಡಿದರು.
ಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ್ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ “ಯಕ್ಷಗಾನ ಕಲಾಕೇಂದ್ರ ತನ್ನ ಸಾರ್ಥಕ 50 ವರ್ಷಗಳ ಪಯಣದಲ್ಲಿ 3,000ಕ್ಕೂ ಅಧಿಕ ಹಿಮ್ಮೇಳ ಕಲಾವಿದರನ್ನು ಯಕ್ಷಲೋಕಕ್ಕೆ ಸಮರ್ಪಿಸಿದೆ. ಈ ಮೂಲಕ ಸಂಸ್ಥೆಯ ಸ್ಥಾಪನೆಯ ಕನಸು ನನಸಾಗಿದೆ. ಹೂವಿನ ಕೋಲಿನಂತಹ ಕಲಾ ಪ್ರಕಾರವನ್ನು ಉಳಿಸುವ ನಿಟ್ಟಿನಲ್ಲಿ ಈ ಬಾರಿ ಪರಿಸರದ 120 ಮನೆಗಳಲ್ಲಿ ಹೂವಿನ ಕೋಲು ಪ್ರದರ್ಶನವನ್ನು ನಡೆಸಲಾಗಿದೆ. ಇದೀಗ ಕೇಂದ್ರ ನಡೆಸುತ್ತಿರುವ ಚೆಂಡೆ, ಮದ್ದಳೆ, ಭಾಗವತಿಕೆ ತರಬೇತಿಯಲ್ಲಿ 100ಕ್ಕೂ ಅಧಿಕ ವಿಧ್ಯಾರ್ಥಿಗಳು ಕಲಿಯುತ್ತಿದ್ದಾರೆ.“ ಎಂದು ಅವರು ವಿವರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕಿ ಪೂರ್ಣಿಮಾ ಮಾತಾಡಿ “ಮಕ್ಕಳು ಯಾವುದೇ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲಿ ಅವರಿಗೆ ನಮ್ಮ ನಾಡಿನ ಭಾಷೆ, ಸಂಸ್ಕೃತಿ, ಕಲೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಮತ್ತು ಅದು ಯಕ್ಷಗಾನದಿಂದ ಸಾಧ್ಯ.” ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾನ್ಯ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಾದ ಜನಾಬ್ ಮೊಹಮ್ಮದ ಅಶ್ಪಾಕ್ ಹುಸೇನ್ ಇವರನ್ನು ಅವರ ಯಕ್ಷಗಾನ ಸೇವೆಗಾಗಿ ಗೌರವಿಸಲಾಯಿತು.
ಬ್ರಹ್ಮಾವರ ತಾಲೂಕು ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ, ಉಪ್ಪೂರು ತೆಂಕಬೆಟ್ಟು ವಿನಾಯಕ ಯಕ್ಷಗಾನ ಸಂಘದ ಗೌರವಾಧ್ಯಕ್ಷ ವೆಂಕಟೇಶ್ ಕ್ರಮಧಾರಿ, ಸಾಂಸ್ಕೃತಿಕ ಸಮಿತಿ ಸದಸ್ಯ ಅನಂತಪದ್ಮನಾಭ ಐತಾಳ್ ಕೋಟ ಸಂದರ್ಭೋಚಿತವಾಗಿ ಮಾತನಾಡಿದರು. ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ಗುಂಡ್ಮಿ ರಾಮಚಂದ್ರ ಐತಾಳರು ಕಾರ್ಯಕ್ರಮ ನಿರ್ವಹಿಸಿ, ಶ್ರೀ ಸೀತಾರಾಮ ಸೋಮಯಾಜಿಯವರು ಕೃತಜ್ಞತೆ ಸಲ್ಲಿಸಿದರು.