ಸುರತ್ಕಲ್ : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಸುರತ್ಕಲ್ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 05 ಜನವರಿ 2025ರಂದು ಸುರತ್ಕಲಿನ ವಿದ್ಯಾದಾಯಿನಿ ಕಲಾಮಂದಿರದಲ್ಲಿ ಆಯೋಜಿಸಿರುವ 40ರ ಸಂಭ್ರಮದ ಪ್ರಯುಕ್ತ ‘ನಲ್ವತ್ತರ ನಲಿವು -1’ ಉದ್ಘಾಟನಾ ಸಮಾರಂಭ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವದಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು “ಭಾರತೀಯ ಶಾಸ್ತ್ರೀಯ ಕಲಾಪ್ರಕಾರಗಳು ಆತ್ಮವನ್ನು ಪರಮಾತ್ಮನಡೆಗೆ ಕೊಂಡೊಯ್ಯುವ ಒಂದು ಕಲಾಪ್ರಕಾರವಾಗಿದೆ. ಇದನ್ನು ಅಷ್ಟೇ ಶ್ರದ್ಧೆಯಿಂದ ಆರಾಧಿಸಿ ಪ್ರದರ್ಶಿಸಿದಾಗ ಮನುಷ್ಯನಲ್ಲಿ ಸಾತ್ವಿಕ ಭಾವನೆ ಉಂಟಾಗುತ್ತದೆ. ಕಳೆದ 40 ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿ ಅಸಂಖ್ಯಾತ ಶಿಷ್ಯ ವರ್ಗವನ್ನು ಹೊಂದಿರುವ ಸಂಸ್ಥೆಯ ರೂವಾರಿ ಚಂದ್ರಶೇಖರ ನಾವಡರು ಅಭಿನಂದನಾರ್ಹರು” ಎಂದು ನುಡಿದರು.
ನಾಟ್ಯಾಂಜಲಿ ಸಂಸ್ಥೆಯ ಗೌರವಾರ್ಪಣೆಯನ್ನು ಎಚ್.ಯು. ಅನಂತಯ್ಯ, ಎಸ್. ಸುಬ್ರಾಯ ಹಾಲಂಬಿ ಕುಂದಾಪುರ, ವೆಂಕಟರಮಣ ಐತಾಳ್ ಕೋಟೇಶ್ವರ, ಪಿ. ಪುರುಷೋತ್ತಮ ರಾವ್ ಕೃಷ್ಣಾಪುರ, ತಿರುಮಲೇಶ್ವರ ಭಟ್ ಕಲ್ಲಡ್ಕ, ಸರ್ವೋತ್ತಮ ಅಂಚನ್ ಮುಲ್ಕಿ, ಪಿ. ಸುಧಾಕರ ಬೈಂದೂರು, ಪೂರ್ಣಿಮಾ ಸಿ. ಕದ್ರಿ ಇವರಿಗೆ ಕೊಡಮಾಡಲಾಯಿತು.
ಕೊನೆಯಲ್ಲಿ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ ಇವರ ನಿರ್ದೇಶನದಲ್ಲಿ ‘ರಸ ಗಣಪತಿ’ ಎಂಬ ಶಾಸ್ತ್ರೀಯ ನೃತ್ಯ ಸಂಪದವು ಸಂಸ್ಥೆಯ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಜರಗಿತು. ಹಿಮ್ಮೇಳ ಕಲಾವಿದರಾಗಿ ಶ್ರೀಮತಿ ಪವಿತ್ರ ವಿನಯ್, ಶ್ರೀ ಬಾಲಚಂದ್ರ ಭಾಗವತ್, ಶ್ರೀ ಶ್ರೀಧರ್ ಆಚಾರ್ಯ ಪಾಡಿಗಾರ್ ಇವರುಗಳು ಸಹಕರಿಸಿದರು. ಶ್ರೀಮತಿ ರಾಜಶ್ರೀ ಶ್ರೀಕಾಂತ್ ರಾವ್ ಪ್ರಾರ್ಥಿಸಿ, ಶ್ರೀ ದಾಮೋದರ ಶರ್ಮ ನಿರೂಪಿಸಿದರು. ವಿದ್ವಾನ್ ಕೆ. ಚಂದ್ರಶೇಖರ ನಾವಡ ಸ್ವಾಗತಿಸಿ, ಧನ್ಯವಾದ ನೀಡಿ, ಟ್ರಸ್ಟಿ ಸುಮಾ ಸಿ. ನಾವಡ ಸಹಕರಿಸಿದರು.