ಮಂಗಳೂರು : ಕಲಾಭಿ (ರಿ) ಮಂಗಳೂರು ಹಾಗೂ ಕೆನರಾ ಕಲ್ಚರಲ್ ಅಕಾಡೆಮಿಯು ಜಂಟಿಯಾಗಿ ಆಯೋಜಿಸಿರುವ ‘ಅರಳು 2024’ರ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 11-04-2024ರಂದು ಮಂಗಳೂರಿನ ಕೆನರಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ರಾಜೇಶ್, ಕಲಾಭಿ ಸಂಸ್ಥೆಯ ಅಧ್ಯಕ್ಷರಾಗಿರುವ ಸುರೇಶ್ ನಾಯ್ಕ್, ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಅರೆಹೊಳೆ ಸದಾಶಿವ ರಾವ್, ಕೆನರಾ ಹೈಸ್ಕೂಲ್ ಅಸೋಸಿಯೇಷನ್ನಿನ ಪಿ. ಆರ್ . ಒ. ಉಜ್ವಲ್ ಮಲ್ಯ ಹಾಗೂ ಕೆನರಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ ಮೌರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಾಭಿ ಸಂಸ್ಥೆಯ ಸ್ಥಾಪಕ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿಯ ಸಂಯೋಜಕರಾದ ಉಜ್ವಲ್ ಯು.ವಿ. ಸಂಸ್ಥೆಯ ಪರಿಚಯವನ್ನು ಮಾಡಿದರು. ‘ಅರಳು 2024’ ಕಾರ್ಯಗಾರದ ನಿರ್ದೇಶಕರಾಗಿರುವ ಭುವನ್ ಮಣಿಪಾಲ್ ವಂದಿಸಿದರು. 10 ದಿನಗಳ ಈ ಕಾರ್ಯಾಗಾರದಲ್ಲಿ ನಿರ್ದೇಶಕರುಗಳಾಗಿ ರಾಜು ಮಣಿಪಾಲ್ ಮತ್ತು ರಮೇಶ್ ಕೆ. ಹಾಗೂ ಸಹ ನಿರ್ದೇಶಕರಾಗಿ ಕೆನರಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಕ್ಕಳನ್ನು ತಂಡಗಳಾಗಿ ವಿಭಜಿಸಿ, ಕಾರ್ಯಾಗಾರದ ನಿರ್ದೇಶಕರುಗಳು ಮಕ್ಕಳನ್ನು ವಿವಿಧ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿದರು. ವಿವಿಧ ಆಟಗಳನ್ನು ಆಡುತ್ತಾ, ಕಲಿಯುತ್ತಾ ಮಕ್ಕಳು ಮೊದಲ ದಿನದ ಶಿಬಿರವನ್ನು ಆನಂದಿಸಿದರು.