ಮಂಗಳೂರು : ಚಿಣ್ಣರ ಚಾವಡಿ ವಾಮಂಜೂರು ಇದರ ಆಶ್ರಯದಲ್ಲಿ ‘ಜೋಕುಲಾಟಿಕೆ’ ಚಿಣ್ಣರ ಸಂತಸ ಕಲಿಕಾ ಶಿಬಿರವು ದಿನಾಂಕ 25-05-2024ರಂದು ಜೈ ಶಂಕರ್ ಮಿತ್ರ ಮಂಡಳಿ ತಿರುವೈಲ್ ವಾಮಂಜೂರು ಇಲ್ಲಿ ಆರಂಭಗೊಂಡಿತು.
ಶಿಬಿರವನ್ನು ಉದ್ಘಾಟಿಸಿದ ಜೈ ಶಂಕರ್ ಮಿತ್ರ ಮಂಡಳಿ ತಿರುವೈಲ್ ವಾಮಂಜೂರು ಇದರ ಗೌರವಾಧ್ಯಕ್ಷ ಮತ್ತು ರೈತ ಮುಖಂಡರಾಗಿರುವ ಲಿಂಗಪ್ಪ ಸಾಲಿಯನ್ ಮಾತನಾಡಿ “ಮಕ್ಕಳು ಈ ಸಮಾಜದ ಆಸ್ತಿಗಳು ಸಮಾಜದ ಭವಿಷ್ಯ ಮಕ್ಕಳಲ್ಲಿ ಅಡಗಿದೆ. ಅಂತಹ ಮಕ್ಕಳು ತಮ್ಮ ಪ್ರತಿಭೆಯನ್ನು ಬೆಳಗಿಸಿದರೆ ಮಾತ್ರ ಭವಿಷ್ಯದಲ್ಲಿ ಸಾಮಾಜಿಕ ಪ್ರಗತಿ ಸಾಧ್ಯ. ಇಂತಹ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಬೆಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಂಥ ಶಿಬಿರಗಳ ಮಹತ್ವವನ್ನು ಮಕ್ಕಳ ಹೆತ್ತವರು ಅರಿತುಕೊಳ್ಳುವುದರೊಂದಿಗೆ ತಮ್ಮ ಮಕ್ಕಳೊಳಗೆ ಇರುವ ಪ್ರತಿಭೆಯನ್ನು ಬೆಳೆಸುವುದರಲ್ಲಿ ಹೆತ್ತವರು ಮುಂದಾಗಬೇಕು.” ಎಂದರು.
ಜೈ ಶಂಕರ್ ಮಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾದ ರಘು ಸಾಲಿಯನ್ ಮಾತನಾಡಿ “ಮಕ್ಕಳು ಪರಿಸರದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಸಾಮಾನ್ಯ ಜ್ಞಾನವನ್ನು ತಮ್ಮೊಳಗೆ ಹೆಚ್ಚಿಸಿಕೊಳ್ಳಬೇಕು. ಇದರೊಂದಿಗೆ ಮಕ್ಕಳು ಪರಿಸರದ ಜೊತೆ ಬೆರೆತು ತಮ್ಮ ಮನೆಯಂಗಳದಲ್ಲಿ ಕೃಷಿ, ತರಕಾರಿ ತೋಟ, ಕೈತೋಟ ಮೊದಲಾದವುಗಳನ್ನು ತಾವೇ ನಿರ್ಮಿಸಿಕೊಳ್ಳುತ್ತಾ ಪರಿಸರದ ಜೊತೆ ಒಂದಾಗಿ ಮಕ್ಕಳು ಬೆರೆತರೆ ಭವಿಷ್ಯ ಉಜ್ವಲವಾಗುವುದು.” ಎಂದರು. ಜೈ ಶಂಕರ್ ಮಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾದ ಪುರುಷೋತ್ತಮ್ ಅಂಚನ್ ಮಕ್ಕಳಿಗೆ ಶುಭ ಕೋರಿದರು.
ಉದ್ಘಾಟನಾ ಸಮಾರಂಭದಲ್ಲಿ ಅಂಗನವಾಡಿ ಶಿಕ್ಷಕಿ ಮಾಲತಿ ಹೊನ್ನಯ್ಯ ಅಂಚನ್, ವಕೀಲರಾದ ಮನೋಜ್ ವಾಮಂಜೂರು, ರೈತ ಮುಖಂಡರಾದ ಬಾಬು ಸಾಲಿಯಾನ್, ಶೇಖರ ಗಂಪ ಮೊದಲಾದವರು ಉಪಸ್ಥಿತರಿದ್ದರು.
ಸುಮಾರು 50ರಷ್ಟು ಸ್ಥಳೀಯ ಪ್ರತಿಭೆಗಳನ್ನೊಳಗೊಂಡ ಈ ಶಿಬಿರವು ಎರಡು ದಿನಗಳ ಕಾಲ ನಡೆಯಲಿದ್ದು ಚಿತ್ರಕಲೆ, ಕ್ರಾಫ್ಟ್ ನಟನೆಯ ಕುರಿತಾಗಿ ಮಕ್ಕಳಿಗೆ ತರಬೇತುಗಳನ್ನು ನೀಡಲಿದೆ ಎಂದು ಶಿಬಿರದ ನಿರ್ದೇಶಕರಾದ ಪ್ರವೀಣ್ ಕುಮಾರ್ ತಾರಿಗುಡ್ಡೆ ತಿಳಿಸಿದ್ದಾರೆ.