ಮಂಗಳೂರು : ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಸಹಯೋಗದಲ್ಲಿ ಘಟಕದ ಗೌರವ ಕಾರ್ಯದರ್ಶಿ ಸಾಹಿತಿ ಎನ್. ಗಣೇಶ್ ಪ್ರಸಾದ್ ಜೀ ( ಜೀಜೀ ) ಅವರು ತಮ್ಮ ಹೆತ್ತವರ ಹೆಸರಿನಲ್ಲಿ ಸ್ಥಾಪಿಸಿದ ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವು ದಿನಾಂಕ 14-07-2024ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಮಾರ್ಗದರ್ಶಿ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರು ಮಾತನಾಡಿ “ಹಿರಿಯರ ಉನ್ನತ ವ್ಯಕ್ತಿತ್ವ ಮತ್ತು ಆದರ್ಶಗಳ ನೆನಪಿನಲ್ಲಿ ಪ್ರತಿಷ್ಠಾನವನ್ನು ಹುಟ್ಟುಹಾಕಿ ಉತ್ತಮವಾದ ಧ್ಯೇಯೋದ್ದೇಶಗಳನ್ನು ಹೊಂದಿರುತ್ತಾ ಆ ನಿಟ್ಟಿನಲ್ಲಿ ಸಾಗುವುದರಿಂದ ಅಳಿದ ಮೇಲೆಯೂ ಅಂತಹ ವ್ಯಕ್ತಿಗಳನ್ನು ಉಳಿಸುವ ಕಾರ್ಯವಾಗುತ್ತದೆ. ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದೇ ಮುಖ್ಯ, ಅದನ್ನು ಹಿರಿಯರು ತೋರಿಸಿಕೊಟ್ಟಿದ್ದು ಜೀಜೀಯವರು. ಅಂತಹ ಆದರ್ಶಗಳನ್ನು ಪ್ರತಿಷ್ಠಾನದ ಮೂಲಕ ಜೀವಂತವಿರಿಸಲು ಉದ್ದೇಶಿಸಿರುವುದು ನಿಜಕ್ಕೂ ಶ್ಲಾಘನೀಯ.” ಎಂದರು.
ಜೀಜೀಯವರು ಪ್ರಸ್ತಾವನೆಗೈದು, ತಮ್ಮ ತಂದೆ ತಾಯಿ ಹೆಜ್ಜೆ ಹೆಜ್ಜೆಗೂ ತಮ್ಮ ಬದುಕು ಮತ್ತು ಸಾಹಿತ್ಯದ ಹಾದಿಯಲ್ಲಿ ಪ್ರೇರಣೆಯಾದುದನ್ನು ಸ್ಮರಿಸುತ್ತಾ “ಡಾ. ಚೂಂತಾರು ತಮ್ಮ ತಾಯಿ ಸರೋಜಿನಿ ಭಟ್ ಹೆಸರಿನ ಪ್ರತಿಷ್ಠಾನದ ಮೂಲಕ ನಡೆಸುತ್ತಿರುವ ಸಮಾಜಮುಖೀ ಚಟುವಟಿಕೆಗಳೇ ಈ ನಡೆಗೆ ಪ್ರೇರಣೆ.” ಎಂದರು.
ಈ ಸಂದರ್ಭದಲ್ಲಿ , ದ. ಕ. ಜಿಲ್ಲಾ ಕ. ಸಾ. ಪ. ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ‘ಷಷ್ಟಿಪೂರ್ತಿ ಸಂಭ್ರಮ – ಸಾಹಿತ್ಯ ಸಂಗಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಇಂದು ಜೀಜೀಯವರು ತಮ್ಮ ಷಷ್ಟಿಪೂರ್ತಿ ಕಾರ್ಯಕ್ರಮದ ಜೊತೆಗೆ ಮನೆಯಂಗಳದಲ್ಲಿ ಇಂತಹ ಮಹದುದ್ದೇಶಕ್ಕೆ ನಾಂದಿ ಹಾಡಿರುವುದು ಹೆಮ್ಮೆಯ ವಿಚಾರ. ಕನ್ನಡ ಸಾಹಿತ್ಯ ಪರಿಷತ್ತು ಮನೆ ಮನೆ ಮತ್ತು ಯುವ ಜನತೆಯನ್ನು ತಲುಪಲು ಹಲವಾರು ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.” ಎಂದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸನತ್ ಕುಮಾರ್ ಜೈನ್ , ಎನ್. ಸುಬ್ರಾಯ ಭಟ್, ಸುಖಲಾಕ್ಷಿ ಸುವರ್ಣ , ಎಂ. ಟಿ. ಭಟ್, ಮುರಳೀಧರ ಭಾರದ್ವಾಜ್, ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಮಹೇಂದ್ರ ಹಡಗಲಿ , ವೆಂಕಟೇಶ್ ಗಟ್ಟಿ ಹಾಗೂ ನಿಜಗುಣ ದೊಡ್ಡಮನಿ ಉಪಸ್ಥಿತರಿದ್ದರು.
ಉಷಾ ಗಣೇಶ್ ಪ್ರಸಾದ್ ಜೀ ಪ್ರಾರ್ಥಿಸಿ, ಡಾ. ಮೀನಾಕ್ಷಿ ರಾಮಚಂದ್ರ ನಿರೂಪಿಸಿ, ಪ್ರತಿಷ್ಠಾನದ ಅಧ್ಯಕ್ಷ ಎನ್. ತಿಲಕ್ ಪ್ರಸಾದ್ ಜೀ ವಂದಿಸಿದರು.