ಕದ್ರಿ : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 25-05-2024 ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರತ್ನ ಸಂಸ್ಥೆಗಳ ಅಧ್ಯಕ್ಷರಾದ ಉಳಿದೊಟ್ಟು ಶ್ರೀ ರವೀಂದ್ರ ಶೆಟ್ಟಿ ಮಾತನಾಡಿ “ಯಕ್ಷ ಶಿಕ್ಷಣ ಇಂದಿನ ಮಕ್ಕಳಲ್ಲಿ ವಿಶೇಷ ಶಕ್ತಿಯನ್ನು ನೀಡಿ ಸಮಾಜಮುಖೀ ಕಾರ್ಯಗಳನ್ನು ಮಾಡಲು ಅವರನ್ನು ಸಶಕ್ತಗೊಳಿಸುತ್ತದೆ. ಅಲ್ಲದೇ, ಅಲೆವೂರಾಯರಂತಹ ಯಕ್ಷಗುರುಗಳು ಶಾಲೆ ಹಾಗೂ ಕಾಲೇಜುಗಳಲ್ಲಿ ನಾಟ್ಯ ತರಗತಿಗಳನ್ನು ನಡೆಸಿ ಹವ್ಯಾಸಿಗಳನ್ನೂ ವ್ಯವಸಾಯಿಗಳ ಹಂತಕ್ಕೆ ತಲುಪಿಸುತ್ತಿದ್ದಾರೆ. ನಮ್ಮ ವಿದ್ಯಾರತ್ನ ಸಂಸ್ಥೆಗಳಲ್ಲೂ ಪಠ್ಯದ ಜೊತೆಗೆ ಯಕ್ಷಗಾನವನ್ನೂ ಕಲಿಸುತ್ತೇವೆ. ಅವರು ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲೂ ಮುಂದಿರುತ್ತಾರೆ. ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ಶುಭ ಹಾರೈಸುತ್ತೇನೆ.” ಎಂದುರು.
ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಇವರು ಚೇತನಾ ವಿಕಾಸ ಕೇಂದದ ಬಗ್ಗೆ ಹಾಗೂ ಅಮ್ಮುಂಜೆ ಶ್ರೀ ಜನಾರ್ದನ ಇವರು ಪಟ್ಟಗುತ್ತು ಮಹಾಬಲ ಶೆಟ್ಟರ ಬಗ್ಗೆ ಅಭಿನಂದನಾಮಾತುಗಳನ್ನಾಡಿದರು. ಕದ್ರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀಮತಿ ಕುಸುಮಾ ದೇವಾಡಿಗ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸಂಸ್ಥೆಯ ಗೌರವ ಸಂಚಾಲಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಿವ್ಯಾಂಗ ಮಕ್ಕಳ ಚೇತನಾ ವಿಕಾಸ ಕೇಂದ್ರ ಶಾಲೆಯನ್ನು ಒಂದು ಸಂಸ್ಥೆಯ ನೆಲೆಯಲ್ಲಿ ಗೌರವಿಸಿ, ಸನ್ಮಾನಿಸಲಾಯಿತು. ಅಂತೆಯೇ ಯಕ್ಷಗಾನ ಮೇಳದ ಯಜಮಾನ ಹಾಗೂ ಸಂಘಟಕರಾದ ಪಟ್ಲಗುತ್ತು ಮಹಾಬಲ ಶೆಟ್ಟಿಯವರಿಗೆ ‘ಯಕ್ಷ ಸರಯೂ’ ಬಿರುದುನೀಡಿ ಸನ್ಮಾನಿಸಲಾಯಿತು.
ಶೀಗಳಾದ ಗಣರಾಜ್, ವರ್ಕಾಡಿ ಮಧುಸೂದನ ಅಲೆವೂರಾಯ, ಸಂತೋಷ್, ವರ್ಕಾಡಿ ಮಾಧವ ನಾವಡ, ಪ್ರಭಾಕರ ರಾವ್ ಪೇಜಾವರ, ಕೃಪಾ ಖಾರ್ವಿ, ಮನ್ವಿತ್ ಬಿ. ಶೆಟ್ಟಿ, ಕಾವ್ಯ, ಲಿಖಿತಾ, ಕೃತಿ, ನಿತ್ಯಶ್ರೀ ಉಪಸ್ಥಿತರಿದ್ದರು. ಶೋಭಾ ಪೇಜಾವರ ಇವರು ಧನ್ಯವಾದ ಸಮರ್ಪಿಸಿದರು.ಸಭಾರಂಭದ ಮೊದಲು ಸರಯೂ ಸಂಸ್ಥೆ ಹಾಗೂ ಅತಿಥಿಗಳ ಕೂಡುವಿಕೆಯಿಂದ ‘ಮೇಧಿನಿ ನಿರ್ಮಾಣ’ ಹಾಗೂ ಸಭೆಯ ಬಳಿಕ ‘ಮಹಿಷ ವಧೆ’ ಬಯಲಾಟ ಪ್ರಸ್ತುತಗೊಂಡಿತು.