ಮುಡಿಪು: ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ 2024-25ನೇ ಸಾಲಿನ ಯಕ್ಷನಾಟ್ಯ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 19 ಡಿಸೆಂಬರ್ 2024ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿ. ವಿ. ಕುಲಸಚಿವ ರಾಜು ಮೊಗವೀರ ಮಾತನಾಡಿ “ಹಿಂದೆ ಪುರಾಣ ಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸುವಲ್ಲಿ ಯಕ್ಷಗಾನವು ಮಹತ್ತರವಾದ ಪಾತ್ರ ವಹಿಸಿತ್ತು. ಯಕ್ಷಗಾನವು ಕುಣಿತ, ಸಂಗೀತ, ಬಣ್ಣಗಾರಿಕೆ, ವೇಷಭೂಷಣ, ಅಭಿನಯ ಸೇರಿದಂತೆ ಎಲ್ಲವನ್ನೂ ಹೊಂದಿರುವ ಪರಿಪೂರ್ಣ ಕಲೆಯಾಗಿ ರೂಪುಗೊಂಡಿದೆ. ಅನೇಕ ಹಿರಿಯ ಕಲಾವಿದರು ತಮ್ಮ ಅನುಭವಗಳ ಮೂಲಕ ಯಕ್ಷಗಾನವನ್ನು ಬೆಳೆಸಿದ್ದಾರೆ. ಯುವ ಕಲಾವಿದರು ಅಂತಹ ಅನುಭವಿ ಕಲಾವಿದರ ಜೊತೆಗೆ ಒಡನಾಟ ಬೆಳೆಸಿಕೊಂಡಾಗ, ಪರಂಪರೆ ಮತ್ತು ವರ್ತಮಾನದ ಅನುಸಂಧಾನ ಸಾಧ್ಯ. ಯಕ್ಷಗಾನದಲ್ಲಿ ಸುಂದರ ಕನ್ನಡ ಇದೆ. ಕನ್ನಡ ಭಾಷೆಯ ಬೆಳವಣಿಗೆಗೂ ಯಕ್ಷಗಾನದ ಪ್ರಭಾವ ಮಹತ್ತರವಾದುದು. ಇಂದಿನ ಆಧುನಿಕತೆಯಲ್ಲಿ ಯಕ್ಷಗಾನದ ಪರಂಪರೆಗೆ ಯಾವುದೇ ಧಕ್ಕೆಯಾಗದಂತೆ ಕ್ರಮಬದ್ಧವಾಗಿ ಮುಂದುವರಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಂಗಳೂರು ವಿ. ವಿ.ಯ ಯಕ್ಷಗಾನ ಅಧ್ಯಯನ ಕೇಂದ್ರವು ಈ ನಿಟ್ಟಿನಲ್ಲಿ ಶೈಕ್ಷಣಿಕ ಕಾರ್ಯಯೋಜನೆಗಳೊಂದಿಗೆ ಮುನ್ನಡೆಯುತ್ತಿದೆ.” ಎಂದರು.
ಯಕ್ಷಗುರುಗಳಾದ ದಿವಿತ್ ಎಸ್. ಕೋಟ್ಯಾನ್ ಮಾತನಾಡಿ “ಯಕ್ಷಗಾನವು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು, ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಈ ಕಲೆಗಿದೆ.” ಎಂದರು. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಹಿಂದೆ ಯಕ್ಷಗಾನದ ಕಲಿಕೆ ಪೂರ್ವರಂಗದಲ್ಲಿ ಸಿಗುತ್ತಿತ್ತು. ವರ್ಷಗಳ ಕಾಲ ಈ ಕಲಿಕೆ ಸಾಗುತ್ತಿತ್ತು. ಇಂದು ಕಲಿಕಾ ಕೇಂದ್ರಗಳು ಆರಂಭವಾಗಿ ಯಕ್ಷಗಾನ ಕಲಿಯುವವರಿಗೆ ಪ್ರಾಥಮಿಕ ಜ್ಞಾನ ಸುಲಭವಾಗಿ ದೊರೆಯುವಂತಾಗಿದೆ.’ ಎಂದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ, ಯಕ್ಷಗಾನ ಅಧ್ಯಯನ ಕೇಂದ್ರದ ಸ್ವಾತಿ ರಾವ್, ಯಕ್ಷಮಂಗಳ ತಂಡದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹೇಮ ಮತ್ತು ಸ್ವಾತಿ ಪ್ರಾರ್ಥಿಸಿ, ವಿದ್ಯಾರ್ಥಿ ಶ್ರೇಯಸ್ ಕಾರ್ಯಕ್ರಮ ನಿರೂಪಿಸಿ, ಕೇಂದ್ರದ ಸಂಶೋಧನಾಧಿಕಾರಿ ಡಾ. ಸತೀಶ್ ಕೊಣಾಜೆ ವಂದಿಸಿದರು. ಬಳಿಕ ಯಕ್ಷಗುರುಗಳ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಯಕ್ಷಗಾನ ತರಬೇತಿಯಲ್ಲಿ ತೊಡಗಿಸಿಕೊಂಡರು.