ಕಟೀಲು : ಶ್ರೀ ದುರ್ಗಾ ಮಕ್ಕಳ ಮೇಳ (ರಿ.) ಇದರ 16ನೇ ವಾರ್ಷಿಕ ಕಲಾಪರ್ವವು ದಿನಾಂಕ 28 ಡಿಸೆಂಬರ್ 2024ರಂದು ಕಟೀಲು ಸರಸ್ವತೀ ಸದನದಲ್ಲಿ ಉದ್ಘಾಟನೆಗೊಂಡಿತು. ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ರಘುನಾಥ ಕಾಮತ್ ಇವರ ಕಲಾಪರ್ವದ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಮಾರಂಭದಲ್ಲಿ ಭಾಗವಹಿಸಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಇವರು ಮಾತನಾಡಿ “ಮಕ್ಕಳಲ್ಲಿ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಿದಾಗ ಅವರಲ್ಲಿ ಶಿಸ್ತು ಸಂಸ್ಕಾರ ಜ್ಞಾನಾಭಿವೃದ್ಧಿ ಸಾಧ್ಯ. ಶಾಲಾ ಪಠ್ಯಗಳಲ್ಲಿ ಪುರಾಣದ ವಿಷಯಗಳು ಕಡಿಮೆಯಾಗುತ್ತಿದ್ದು, ಯಕ್ಷಗಾನದ ಬಗ್ಗೆ ಅಸಕ್ತಿ ಮೂಡಿಸುವ ಅಗತ್ಯವಿದೆ. ಚೌಕಿಗೆ ಮಕ್ಕಳು ಅಸಕ್ತಿಯಿಂದ ಬಂದು ವೇಷಹಾಕುವುದನ್ನು ಕುತೂಹಲದಿಂದ ನೋಡುತ್ತಿದ್ದ ದಿನಗಳು ಬದಲಾಗಿವೆ. ಯಕ್ಷಗಾನಕ್ಕೆ ಪ್ರಸಿದ್ಧವಾದ ಕಟೀಲಿನಲ್ಲಿ ಮಕ್ಕಳ ಮೇಳದ ಮೂಲಕ ಯಕ್ಷಗಾನ ಕಲಿಸುವ ಅಭಿನಂದನೀಯ ಕೆಲಸ ಆಗುತ್ತಿದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಖ್ಯಾತ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರಿಗೆ ‘ದುರ್ಗಾ ಮಕ್ಕಳ ಮೇಳ’ ಪ್ರಶಸ್ತಿ, ಹಿಮ್ಮೇಳ ಕಲಾವಿದ ರಾಮಪ್ರಕಾಶ ಕಲ್ಲೂರಾಯರಿಗೆ ‘ಶ್ರೀನಿಧಿ ಅಸ್ರಣ್ಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮಕ್ಕಳ ಮೇಳದ ವಿದ್ಯಾರ್ಥಿ ಸಿ.ಎ. ಕೆ.ಎಸ್ ಗಣೇಶ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸುಣ್ಣಂಬಳ ವಿಶ್ವೇಶ್ವರ ಭಟ್ ಮಾತನಾಡಿ “ಯಕ್ಷಗಾನದಲ್ಲಿ ಮರೆತುಹೋಗುತ್ತಿರುವ ವಿವಿಧ ಒಡ್ಡೋಲಗಗಳು ಕುಣಿತಗಳನ್ನು ಮಕ್ಕಳಿಗೆ ಕಲಿಸಿ ಉಳಿಸುವ ಪ್ರಯತ್ನ ಅಭಿನಂದನೀಯ. ಯಕ್ಷಗಾನವೆಂಬ ಸಾಗರದಲ್ಲಿ ಕಲಿತು ಮುಗಿಯುವಂತಹದ್ದಲ್ಲ. ಯಕ್ಷಗಾನದಲ್ಲಿ ಪರಿಪೂರ್ಣತೆ ಎಂಬುದಿಲ್ಲ. ಕಲಾವಿದನಿಗೆ ಪ್ರಸಿದ್ಧಿ ಪ್ರಚಾರ ತಲೆಗೆ ಬರಬಾರದು” ಎಂದರು.
ಬೊಂಡಾಲ ಸಚ್ಚಿದಾನಂದ ಶೆಟ್ಟಿ, ರಾಘವೇಂದ್ರ ಆಚಾರ್ಯ ಬಜಪೆ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ಜಯರಾಮ ಶೆಟ್ಟಿ, ಲೀಲಾಕ್ಷ ಕರ್ಕೇರ, ಕಟೀಲು ಶಾಲೆಗಳ ಮುಖ್ಯಸ್ಥರಾದ ಗಿರೀಶ್ ತಂತ್ರಿ, ಚಂದ್ರಶೇಖರ ಭಟ್ ಉಪಸ್ಥಿತರಿದ್ದರು. ಮಕ್ಕಳ ಮೇಳದ ಅಧ್ಯಕ್ಷ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ಪಶುಪತಿ ಶಾಸ್ತ್ರಿ ವಂದಿಸಿ, ವಾಸುದೇವ ಶಣೈ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನ ಪ್ರಸಂಗಗಳು, ವಿವಿಧ ಒಡ್ಡೋಲಗಗಳು, ಪೂರ್ವರಂಗದ ವಿವಿಧ ಕುಣಿತಗಳು ಪ್ರದರ್ಶಿತವಾದವು.