ಬೆಳಗಾವಿ : ರಂಗಸಂಪದ ಬೆಳಗಾವಿ ತಂಡದ ‘ಅಭಿಷೇಕ ಅಲಾಯ್ಸ್ ನಾಟಕೋತ್ಸವ’ದ ಉದ್ಘಾಟನೆ ಮತ್ತು ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ – 2025 ದಿನಾಂಕ 05 ಡಿಸೆಂಬರ್ 2025ರಂದು ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಯಶಸ್ವೀಯಾಗಿ ನೆರೆದ ಮುನ್ನೂರಕ್ಕಿಂತ ಹೆಚ್ಚು ಆಸಕ್ತ ಪ್ರೇಕ್ಷಕರ ಸಮ್ಮುಖದಲ್ಲಿ ಜರುಗಿತು. ಧಾರವಾಡದಿಂದ ಆಗಮಿಸಿದ ನಿವೃತ್ತ ಆಕಾಶವಾಣಿ ಅಧಿಕಾರಿಗಳಾದ ಡಾ. ಶರಭೇಂದ್ರಸ್ವಾಮಿಯವರು ಶ್ರೀ ಎಸ್.ಎಮ್. ಕುಲಕರ್ಣಿ ಸರ ಇವರ ಅನುಪಸ್ಥಿತಿಯಲ್ಲಿ (ಅನಾರೋಗ್ಯದ ಕಾರಣ) ಅಧ್ಯಕ್ಷತೆ ವಹಿಸಿ ಕನ್ನಡ ರಂಗಭೂಮಿಯನ್ನು ಬೆಳಗಾವಿಯಲ್ಲಿ ಸತತವಾಗಿ 47 ವರ್ಷಗಳಿಂದ ಜೀವಂತವಾಗಿಟ್ಟ ರಂಗಸಂಪದ ತಂಡಕ್ಕೆ ಅಭಿನಂದನೆ ಸಲ್ಲಿಸದರು.
ನಾಟಕೋತ್ಸವದ ಉದ್ಘಾಟನೆ ಮಾಡಿದ ಅಭಿಷೇಕ ಅಲಾಯ್ಸ್ ಮಾಲಿಕರು ಮತ್ತು ರಂಗಸಂಪದದ ಪೋಷಕರೂ ಆದ ಶ್ರೀ ಮಧ್ವಾಚಾರ್ಯ ಆಯಿ ಇವರು ಸಾಮಾಜಿಕ ಕಾರ್ಯಗಳಿಗೆ ತಮ್ಮ ಸಂಸ್ಥೆ ಯಾವತ್ತೂ ಸಹಾಯ ಮಾಡುತ್ತಿದೆ. ಅದರಲ್ಲೂ ರಂಗಸಂಪದದಂತಹ ಕಾರ್ಯನಿರತ ರಂಗತಂಡಕ್ಕೆ ಪ್ರಾಯೋಜಕತ್ವ ಮಾಡಲು ಅಭಿಮಾನವೆನಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಆಕಾಶವಾಣಿ ಉದ್ಘೋಷಕರು, ನಟ, ನಿರ್ದೇಶಕ, ಲೇಖಕ ಡಾ. ಶಶಿಧರ ನರೇಂದ್ರ ಇವರು ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆಯ ಮಹತ್ವ ಮತ್ತು ಇತಿಹಾಸವನ್ನು ವಿವರಿಸಿದರು. 1877ರಲ್ಲಿ ಶಿಕ್ಷಕರಾಗಿದ್ದ ಶ್ರೀ ಬಾಳಾಚಾರ್ಯ ಸಕ್ಕರಿ ಇವರು ಹೇಗೆ ಆವಾಗಿನ ಸಂಪೂರ್ಣ ಮರಾಠಿಮಯವಾಗಿದ್ದ ಮುಂಬಯಿ ಪ್ರಾಂತದಲ್ಲಿ, ಗದಗನಲ್ಲಿ ನಾಟಕ ಕಂಪೆನಿ ಶುರುಮಾಡಿ, ಕನ್ನಡ ನಾಟಕ ಬರೆದು ನಟಿಸಿ ಪ್ರದರ್ಶನ ಪ್ರಾರಂಭಿಸಿದರು ಎಂದು ಮವಕಲುಕುವ ಹಾಗೆ ವಿವರಿಸಿದರು. ಹಾಗೆಯೇ ರಂಗಸಂಪದ ತಂಡ 1978ರಲ್ಲಿ ಹಲವಾರು ವಿರೋಧಗಳ ಮಧ್ಯೆ ಶ್ರೀ ಕೃಷ್ಣ ಉಪಾಧ್ಯಾ, ಶ್ರೀ ಶ್ರೀಪತಿ ಮಂಜನಬೈಲು ಮುಂತಾದವರ ಹೋರಾಟದ ಫಲವಾಗಿ ಪ್ರಾರಂಭವಾಗಿ ಸತತ 47 ವ್ರಷಗಳಿಂದ ಬೆಳಗಾವಿ ಮತ್ತು ಕರ್ನಾಟಕದಾದ್ಯಂತ ನಾಟಕ ಪ್ರದರ್ಶನ ಮಾಡುವಲ್ಲಿ ಯಶಸ್ವೀಯಾಗಿದೆ ಎಂದು ಅಭಿನಂದಿಸಿದರು.
ಧಾರವಾಡದ ಮನೋಹರ ಗ್ರಂಥಾಲಯದ ಅಧ್ಯಕ್ಷ ಮತ್ತು ಸಕ್ಕರಿ ಬಾಳಾಚಾರ್ಯ ಟ್ರಸ್ಟಿನ ಖಜಾಂಚಿ ಶ್ರೀ ಸಮೀರ ಜೋಶಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೀ ಸಕ್ಕರಿ ಬಾಳಾಚಾರ್ಯರವರ ಚಿತ್ರಪಟಕ್ಕೆ ಪುಷ್ಪ ಸಮರ್ಪಿಸಿ ವಂದನೆ ಸಲ್ಲಿಸಿಲಾಯಿತು. ನಂತರ ದೀಪ ಬೆಳಗಿ ಉದ್ಘಾಟನೆ ನಡೆಸಲಾಯಿತು. ಶ್ರೀ ಪ್ರಸಾದ ಕಾರಜೋಳ ಕಾರ್ಯದರ್ಶಿ ಸ್ವಾಗತಿಸಿದರು. ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಪ್ರಾಸ್ತಾವಿಕ ನುಡಿ ಹೇಳಿದರು. ಪದ್ಮಾ ಕುಲಕರ್ಣಿ ಆಧುನಿಕ ಕನ್ನಡ ರಂಗಭೂಮಿಯ ಹಿನ್ನೆಲೆ ವಿವರಿಸಿದರು. ಶೀತಲ ರಾಜಪುರೋಹಿತ ಅತಿಥಿಗಳನ್ನು ಪರಿಚಯಿಸಿದರು. ಯೋಗೇಶ ದೇಶಪಾಂಡೆ ಮತ್ತು ರಾಮಚಂದ್ರ ಕಟ್ಟಯವರು ಗೌರವಾರ್ಪಣೆ ಸಲ್ಲಿಸಿ, ಬಸವರಾಜ ಹುಣಶೀಕಟ್ಟಿ ವಂದಿಸಿ, ಅಶೋಕ ಕುಲಕರ್ಣಿ ನಿರೂಪಿಸಿದರು. ನಂತರ ನೀನಾಸಂ ತಂಡದ ‘ಹೃದಯದ ತೀರ್ಪು’ ನಾಟಕ ಪ್ರದರ್ಶನವಾಯಿತು.
