ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸುತ್ತಿರುವ ‘ಬಾಲ ಲೀಲಾ’ ಚಿಣ್ಣರ ಬೇಸಿಗೆ ಶಿಬಿರವು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ದಿನಾಂಕ 10 ಏಪ್ರಿಲ್ 2025ರಂದು ಉದ್ಘಾಟನೆಗೊಂಡಿತು.
ಈ ಶಿಬಿರವನ್ನು ಉದ್ಘಾಟನೆ ಮಾಡಿದ ಸಂಗೀತ ಸಂಯೋಜಕರಾದ ಅರುಣ್ ಹಾವಂಜೆ ಮಾತನಾಡಿ “ನಮ್ಮೂರಿನಲ್ಲಿ ಭಾವನಾ ಫೌಂಡೇಶನ್ ಸಂಘಟಿಸುತ್ತಿರುವ ಬೇಸಿಗೆ ಶಿಬಿರವು ಬಹು ಮಹತ್ವಪೂರ್ಣವಾದುದು ಮತ್ತು ಇಂದಿನ ಆಧುನಿಕ ಜೀವನದ ನಡುವೆ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಕಲೆ, ಅಭಿನಯ, ಸಂಗೀತ ಎಲ್ಲವನ್ನೂ ಸಮೀಕರಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ” ಎಂಬುದಾಗಿ ಅಭಿಪ್ರಾಯವಿತ್ತರು.
ಭಾವನಾ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷರಾದ ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಹಾಗೂ ಶಿಬಿರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ, ವಿಶುರಾವ್ ಹಾವಂಜೆ ಹಾಗೂ ವಿದುಷಿ ಅಕ್ಷತಾ ವಿಶು ರಾವ್ ಉಪಸ್ಥಿತರಿದ್ದರು. ಈ ಬೇಸಿಗೆ ಶಿಬಿರವು ನಾಲ್ಕು ದಿನಗಳ ಕಾಲ ನಡೆಯಲಿದ್ದು, ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ಹಾಗೂ ಕಸವನ್ನು ರಸವಾಗಿಸುವ ಉದ್ದೇಶದೊಂದಿಗೆ ರೂಪಿಸಲಾಗಿದೆ. ಅಭಿನಯ, ಆವೆಮಣ್ಣಿನ ಶಿಲ್ಪಗಳು, ಕಾವಿ ಕಲೆ, ಪಕ್ಷಿ ವೀಕ್ಷಣೆ, ಮನೆಮದ್ದು, ಗ್ರಾಮೀಣ ಆಟಗಳು, ಸಂಗೀತ, ಬಟ್ಟೆಯ ಮೇಲೆ ಮುದ್ರಣ ಕಲೆ ಮುಂತಾಗಿ ಹತ್ತು ಹಲವಾರು ಅಂಶಗಳನ್ನು ಶಿಬಿರದಲ್ಲಿ ಕಲಿಸಿ ಕೊಡಲಾಗುತ್ತಿದೆ.
ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 13 ಏಪ್ರಿಲ್ 2025ರ ಭಾನುವಾರದಂದು ಸಂಜೆ ಗಂಟೆ 2-30ಕ್ಕೆ ನೆರವೇರಲಿದ್ದು, ಇದೇ ಸಂದರ್ಭದಲ್ಲಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ‘ವಿಶ್ವ ಕಲಾ ಸಿಂಧು’ ಪುರಸ್ಕಾರವನ್ನು ಹಿರಿಯ ಕಲಾವಿದರಾದ ರಮೇಶ್ ರಾವ್ ಇವರಿಗೆ ನೀಡಿ ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಥಾನದ ವಿಶ್ವನಾಥ ಶೆಣೈ, ಕುಂದಾಪುರದ ಯುವ ಉದ್ಯಮಿಗಳಾದ ಸಂಪತ್ ಶೆಟ್ಟಿಯವರು ಉಪಸ್ಥಿತರಿರುತ್ತಾರೆ.