ಉಡುಪಿ : ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುತ್ತಿರುವ ದೇಶೀಯ ಜನಪದ ಕಲೆಗಳ ಸರಣಿಯ ಹದಿನೈದನೆಯ ಕಾರ್ಯಕ್ರಮದಲ್ಲಿ ‘ಚನ್ನಪಟ್ಟಣದ ಗೊಂಬೆ’ ತಯಾರಿಕೆಯ ಕಾರ್ಯಾಗಾರದ ಉದ್ಘಾಟನೆಯು ದಿನಾಂಕ 04 ಜನವರಿ 2025ರಂದು ಬಡಗುಪೇಟೆಯಲ್ಲಿ ನಡೆಯಿತು.
ಈ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದ ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್‌ನ ಅಸೋಶಿಯೇಟ್ ಪ್ರೊಫೆಸರ್ ಆರ್ಕಿಟೆಕ್ಟ್ ತ್ರಿವಿಕ್ರಮ್ ಭಟ್ ಇವರು ಮಾತನಾಡಿ “ಭಾರತೀಯ ಕಲೆಗಳು ಬಹು ಶ್ರೇಷ್ಠವಾದುದು. ಅವುಗಳಲ್ಲೂ ಉಪಯೋಗೀ ಕಲೆಗಳು ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿ ನಮ್ಮ ಸೌಂದರ್ಯಪ್ರಜ್ಞೆಯನ್ನು ಬಿಂಬಿಸುವಂತವುಗಳು. ಈ ತೆರನಾದ ಚನ್ನಪಟ್ಟಣದಂತಹ ವಿಶೇಷ ಕಲೆ ಪ್ಲಾಸ್ಟಿಕ್ ಆಟಿಕೆಗಳಿಗೆ ಇಂದಿಗೆ ಸಡ್ಡು ಹೊಡೆದು ನಿಂತಿರುವುದು ಮತ್ತು ಈ ಕಾರ್ಯಾಗಾರವು ಉಡುಪಿಯಲ್ಲಿ ಆಯೋಜನೆಗೊಳ್ಳುತ್ತಿರುವುದು ಬಹು ಸಂತಸದ ಸಂಗತಿ” ಎಂಬುದಾಗಿ ಅಭಿಪ್ರಾಯವಿತ್ತರು.
ಗೊಂಬೆ ತಯಾರಿಕಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಸುಕನ್ಯಾ ನೀಲಸಂದ್ರ ಹಾಗೂ ಸುಂದ್ರಕಲಾರವರು ಈ ಕಾರ್ಯಾಗಾರದಲ್ಲಿ ಕಲಿಸಿಕೊಡುತ್ತಿರುವ ಆಟಿಕೆಗಳ ಉಪಯುಕ್ತತೆ ಹಾಗೂ ತಾಂತ್ರಿಕತೆಯನ್ನು ವಿವರಿಸಿದರು. ಟಿಪ್ಪು ಸುಲ್ತಾನನ ಕಾಲದಲ್ಲಿ ಪರ್ಶಿಯನ್ ಆಟಿಕೆಗಳ ಪ್ರಭಾವದಿಂದ ಚನ್ನಪಟ್ಟಣದಲ್ಲಿ ಬೆಳೆದಿರುವ ಈ ಕಲೆ ಇಂದಿಗೆ ವಿಶ್ವದಾದ್ಯಂತ ಬಹು ಮನ್ನಣೆ ಗಳಿಸುತ್ತಿದೆ. ಹಗುರವಾದ ಮರದಿಂದ ನೈಸರ್ಗಿಕ ವರ್ಣದಲ್ಲಿ ತಯಾರಿಸಲಾಗುವ ಈ ಕಲೆ ಮಕ್ಕಳ ಆಟಿಕೆಗಳಲ್ಲಿ ಬಹು ಉಪಯುಕ್ತವಾಗಿದೆ. ಗೃಹ ಉದ್ಯಮದಲ್ಲಿ ಸಣ್ಣ ಕರಕುಶಲ ವಸ್ತುಗಳು ಮಾರಾಟದಿಂದ ಹೇಗೆ ಇಂದಿಗೆ ಬೆಳೆದು ಸದೃಢವಾಗಿ ನಾವು ನಿಂತಿದ್ದೇವೆ ಎಂಬುದಾಗಿ ವಿವರಿಸಿದರು.
ದೇಶೀಯ ಕಲೆಗಳ ಈ ಕಾರ್ಯಾಗಾರದ ಆಯೋಜನೆಯ ಸದುದ್ದೇಶವೇ ಕರಾವಳಿಯ ಕಲಾಸಕ್ತರು ದೇಶೀಯ ಕಲೆಗಳ ಬಗೆಗೆ ಅರಿವು ಹೊಂದಿ, ಅದರ ಹಿಂದಿನ ಇತಿಹಾಸ, ಶ್ರಮ, ತಾಂತ್ರಿಕತೆಯನ್ನು ತಿಳಿದುಕೊಳ್ಳಬೇಕೆಂಬುದಾಗಿದೆ. ಮಾತ್ರವಲ್ಲದೇ ಬಹು ಉಪಯುಕ್ತತೆಯಿಂದ ಕೂಡಿದ ನಮ್ಮ ನಾಡಿನ ಕಲೆಗಳು ಉಳಿದು – ಬೆಳೆಯಬೇಕಾದಲ್ಲಿ ಈ ಕಾರ್ಯಾಗಾರಗಳು ಹೇಗೆ ಸಹಕಾರವಾಗಬಲ್ಲುದು ಎಂಬುದಾಗಿ ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ವಿವರಿಸಿದರು. ಪೌಂಡೇಶನ್‌ನ ಅಧ್ಯಕ್ಷರಾದ ಯಕ್ಷಗುರು ಹಾವಂಜೆ ಮಂಜುನಾಥರಾವ್ ಉಪಸ್ಥಿತರಿದ್ದರು.
ಹೊಸ ವರ್ಷವನ್ನು ಒಂದು ದೇಶೀಯ ಕಲೆಯ ಕಲಿಯುವಿಕೆಯ ಮೂಲಕ ಆರಂಭಿಸಬೇಕೆಂಬ ಚಿಂತನೆ ಹೊತ್ತ ಈ ಕಾರ್ಯಾಗಾರವನ್ನು ಮಣಿಪಾಲ ವಿಶ್ವವಿದ್ಯಾಲಯ ಹಾಗೂ ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ರಿಸಿಡೆನ್ಸಿಯಲ್ ಸ್ಕೂಲ್ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಚನ್ನಪಟ್ಟಣದ ಗೊಂಬೆಗಳ ವಿವಿಧ ನಮೂನೆಗಳನ್ನು ಕಲಿಸಿಕೊಡಲಾಗುತ್ತಿರುವ ಈ ಕಾರ್ಯಾಗಾರವು ಸೋಮವಾರದ ತನಕ ಬಡಗುಪೇಟೆಯಲ್ಲಿ ಆಯೋಜನೆಗೊಳ್ಳುತ್ತಿದೆ.