ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಇವರ ವತಿಯಿಂದ ಜಿಲ್ಲಾ ಸ್ಕೌಟ್ಸ್ ಸಮುದಾಯ ಭವನದಲ್ಲಿ ಜನನಿ ಫೌಂಡೇಷನ್ ಚಿಕ್ಕಕೊಂಡಗೊಳ ಮತ್ತು ಹಾಸನಾಂಬ ಮಹಿಳಾ ಸಂಘ, ಹೇಮಾವತಿ ನಗರ ಸಹಕಾರದಲ್ಲಿ ಹತ್ತರಿಂದ ಹದಿನಾರು ವರ್ಷ ವಯೋಮಿತಿಯ ಮಕ್ಕಳಿಗಾಗಿ ಹಮ್ಮಿಕೊಂಡ ಮೂರು ದಿನಗಳ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರವು ದಿನಾಂಕ 16 ಮೇ 2025ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ವೈ.ಎಸ್. ವೀರಭದ್ರಪ್ಪ “ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸಕ್ಕೆ ಎಡೆ ಮಾಡಿಕೊಡುತ್ತದೆ. ಚಿಣ್ಣರಿಗಾಗಿ ಹಮ್ಮಿಕೊಂಡಿರುವ ‘ಚಿಣ್ಣರ ಪ್ರತಿಭಾ ಕಲರವ’ ಮಕ್ಕಳಲ್ಲಿ ಸೃಜನಾತ್ಮಕತೆಯನ್ನು ವೃದ್ಧಿಸುತ್ತದೆ. ಇಂತಹ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ವಿಭಿನ್ನ ಅಭಿರುಚಿಗಳನ್ನು ಬೆಳೆಸುತ್ತದೆ. ಮಕ್ಕಳು ಇಂತಹ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ” ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಪಠ್ಯೇತರ ಚಟವಟಿಕೆಗಳು ಮಕ್ಕಳಲ್ಲಿ ಸೃಜನಾತ್ಮಕ ಮನೋಧೋರಣೆಯನ್ನು ಹೆಚ್ಚಿಸುವುದರ ಜೊತೆಗೆ ಪಠ್ಯದಲ್ಲಿಯೂ ಕ್ರಿಯಾಶೀಲವಾಗಿ ತೊಡಗಿಕೊಳ್ಳಲು ಸಹಕಾರಿಯಾಗುತ್ತದೆ. ಸಾಹಿತ್ಯ ವೇದಿಕೆ ಕಳೆದ ನಾಲ್ಕು ವರ್ಷಗಳಿಂದಲೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಕಾರದಲ್ಲಿ ಮಕ್ಕಳಿಗಾಗಿ ವಿಭಿನ್ನ ಚಟವಟಿಕೆಗಳುಳ್ಳ ಬೇಸಿಗೆ ಶಿಬಿರಗಳನ್ನು ಮಾಡುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಜೀವನ ಕೌಶಲಗಳನ್ನು ವೃದ್ಧಿಸುತ್ತವೆ” ಎಂದರು.
ವೇದಿಕೆಯಲ್ಲಿ ಜನನಿ ಫೌಂಡೇಷನ್ ಅಧ್ಯಕ್ಷೆ ಎಚ್.ಎಸ್. ಭಾನುಮತಿ, ಹಾಸನಾಂಬ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾವತಿ ವೆಂಕಟೇಶ್ ಸೇರಿದಂತೆ ಹಲವರು ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಸಾಹಿತ್ಯ ವೇದಿಕೆಯ ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ಪೋಷಕರಾದ ಚಂದನ ಚನ್ನರಾಯಪಟ್ಟಣ, ಮಮತ ಹಾಸನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.