ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾ ಭವನದಲ್ಲಿ ಕೇಂದ್ರೀಯ ಹಿಂದಿ ನಿರ್ದೇಶನಾಲಯ ಆಗ್ರಾ ಭಾರತ ಶಿಕ್ಷಣ ಸಚಿವಾಲಯ (ಉನ್ನತ ಶಿಕ್ಷಣ ವಿಭಾಗ, ಭಾರತ ಸರ್ಕಾರ), ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಿಂದಿ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಐದು ದಿನಗಳ ವಿಶೇಷವಾದ ‘ಹಿಂದಿ ಯುವ ಬರಹಗಾರರ ಶಿಬಿರ’ವು ದಿನಾಂಕ 13-05-2024ರಂದು ಉದ್ಘಾಟನೆಗೊಂಡಿತು.
ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ “ಭಾಷೆ ಸಂವಹನಕ್ಕಿರುವ ಮಾಧ್ಯಮ ಮಾತ್ರವಲ್ಲ; ಅದೊಂದು ಬದುಕು, ಸಂಸ್ಕೃತಿ. ಭಾಷೆ ನಶಿಸಿದರೆ ಸಂಸ್ಕೃತಿಯೇ ನಾಶವಾದಂತೆ. ಹಾಗಾಗಿ ಭಾಷೆ ಬದುಕಿನ ಜೀವಾಳ. ಸೃಜನಾತ್ಮಕ ಬರವಣಿಗೆ ಹೃದಯದಲ್ಲಿ ಹುಟ್ಟುತ್ತದೆ. ಮನಸ್ಸಿನ ಪ್ರಲಾಪ, ಕೋಪ-ತಾಪ, ಪ್ರೀತಿ ಇವೆಲ್ಲವೂ ಮನತಣಿಸುವ ಅಕ್ಷರಗಳ ರೂಪವನ್ನು ತಾಳುತ್ತದೆ. ಅಂತಹ ಬರವಣಿಗೆ ಹೊಸತನದಿಂದ ಕೂಡಿರುತ್ತದೆ. ಅದರ ಜೊತೆಗೆ ನಾವು ನುಡಿಯುವ ಪ್ರತಿ ಮಾತು ಸಂಬಂಧಗಳನ್ನು ಬೆಸೆಯುವಂತಿರಬೇಕೇ ವಿನಃ ಬೇರ್ಪಡಿಸುವಂತಿರಬಾರದು” ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ಪ್ರದೀಪ್ ಕುಮಾರ್ “ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆಯ ಅಭಿವೃದ್ಧಿ ಜೊತೆಗೆ ಕಥೆ, ಕವಿತೆ, ಕಾದಂಬರಿ, ನಾಟಕ, ಪತ್ರಿಕೋದ್ಯಮ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಲೇಖನಗಳನ್ನು ರಚಿಸುವ ಕುರಿತಾಗಿ ಯುವ ಮನಸ್ಸುಗಳಿಗೆ ತಿಳಿಸಿಕೊಡುವುದಕ್ಕಾಗಿಯೇ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ” ಎಂದರು.
ಆನ್ ಲೈನ್ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಸುನಿಲ್ ಬಾಬುರಾವ್ ಕುಲಕರ್ಣಿ ಮಾತನಾಡಿ “ಸಾಹಿತ್ಯ ಸೃಷ್ಟಿಸಲು ಸಾಕಷ್ಟು ಓದಬೇಕು. ಪ್ರೇಮ ಕವಿತೆ, ಕಥೆಗಳನ್ನು ಎಲ್ಲರೂ ಬರೆಯುತ್ತಾರೆ. ಆದರೆ ಅಲೌಕಿಕ ಪ್ರೇಮದ ಅನುಭೂತಿ ಅಭಿವ್ಯಕ್ತ ಪಡಿಸಲು ಶಕ್ತನಾಗುವವನೇ ನಿಜವಾದ ಕವಿ” ಎಂದರು. ಕಾರ್ಯನಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, “ಇತ್ತೀಚಿನ ದಿನಗಳಲ್ಲಿ ಹಿಂದಿ ಬಹಳ ಜನಪ್ರಿಯಗೊಳ್ಳುತ್ತಿದೆ. ವಿದ್ಯಾರ್ಥಿಗಳು ಬರೆಯುವ ಮತ್ತು ಓದುವ ಕಡೆ ಹೆಚ್ಚು ಗಮನ ಹರಿಸಬೇಕು. ಅಲ್ಲದೇ, ವಿದ್ಯಾರ್ಥಿಗಳು ಶಿಬಿರದ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.
ಇದೇ ಸಂದರ್ಭದಲ್ಲಿ ಡಾ. ಉಮಾಶಂಕರ್ ವಿರಚಿತ ‘ರಾವಣಾಯನ’ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ನಾಗರತ್ನ ಎನ್. ರಾವ್ ಸ್ವಾಗತಿಸಿ, ಹಿಂದಿ ಉಪನ್ಯಾಸಕಿ ಡಾ. ಸುಮಾ ಟಿ. ರೋಡನ್ನವರ್ ಕಾರ್ಯೇಕ್ರಮ ನಿರೂಪಿಸಿದರು. ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಸಿದ್ದರಾಜು ಎಂ.ಎನ್. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ, ಸ್ನಾತಕೋತ್ತರ ವಿಭಾಗದ ಸಂಯೋಕರುಗಳಾದ ಡಾ. ಸಂಜಯ್ ಅಣ್ಣಾರಾವ್, ಪ್ರೊ. ಜಯವಂತ ನಾಯಕ್, ಪ್ರೊ. ಗಣಪತಿ ಗೌಡ, ಪ್ರೊ. ಲತಾ ಎ. ಪಂಡಿತ್ ಉಪಸ್ಥಿತರಿದ್ದರು. ಶಿಬಿರ ಮೇ 13ರಿಂದ 17ರವರೆಗೆ ಐದು ದಿನಗಳ ಕಾಲ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ನಡೆಯಲಿದೆ. ಐದು ದಿನಗಳ ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಈಶ್ವರ ಪವಾರ್ ಪುಣೆ, ಡಾ. ಪ್ರತಿಭಾ ಮೊದಲಿಯಾರ್ ಮೈಸೂರು, ಪ್ರೊ. ಪ್ರಭಾ ವಿ. ಭಟ್ ಧಾರವಾಡ, ಡಾ. ಸುಮಂಗಲಾ ಮಮ್ಮಿಗಟ್ಟಿ ಧಾರವಾಡ, ಡಾ. ಮಂಜುನಾಥ ಐಕಳ ಮಂಗಳೂರು, ಡಾ. ಮುಕುಂದ ಪ್ರಭು ಮಂಗಳೂರು, ಡಾ. ಸುಮಾ ಟಿ. ರೋಡನ್ನವರ್ ಮಂಗಳೂರು ಭಾಗವಹಿಸಲಿದ್ದಾರೆ.