ಮಂಗಳೂರು : ಮಂಗಳೂರಿನ ಯಕ್ಷಧಾಮದ ಜನಾರ್ದನ ಹಂದೆಯವರ ನೇತೃತ್ವದಲ್ಲಿ ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಹೂವಿನಕೋಲು ಕಾರ್ಯಕ್ರಮವು ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಹಕಾರದೊಂದಿಗೆ ದಿನಾಂಕ 7 ಅಕ್ಟೋಬರ್ 2024ರಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ ಇವರ ಸ್ವಗೃಹ ಕದ್ರಿ ಮಲ್ಲಿಕಾ ಬಡಾವಣೆಯಲ್ಲಿರುವ ‘ಪ್ರಾಸಾದ’ ಇಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಪ್ರಸಿದ್ಧ ತಾಳಮದ್ದಳೆಯ ಅರ್ಥದಾರಿ, ವಿದ್ವಾಂಸ ಪ್ರಭಾಕರ ಜೋಷಿ ಇವರು ಮಾತನಾಡಿ “ನವರಾತ್ರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೆಚ್ಚು ವಿಶೇಷ. ಮಂಗಳೂರು ವಿಭಾಗದಲ್ಲಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರ್ವಹಿಸಿಕೊಂಡು, ಸಾವಿರಕ್ಕೂ ಹೆಚ್ಚು ಸಮ್ಮಾನಗಳನ್ನು ಪೂರೈಸುವ ಏಕೈಕ ದೊಡ್ಡ ಸಂಸ್ಥೆ ಕಲ್ಕೂರ ಪ್ರತಿಷ್ಠಾನ. ಕಲಾ ತಂಡಗಳನ್ನು, ಕಲಾವಿದರನ್ನು ಸ್ವಾಗತಿಸಿಕೊಂಡು ಗೌರವಿಸುತ್ತಾ ಬೆಳೆದ ಸಂಸ್ಥೆಯನ್ನು ಶ್ಲಾಘಿಸೋಣ” ಎಂದು ಹೇಳಿದರು.
“ಸನಾತನ ಸಂಸ್ಕೃತಿಯ ಮೂಲ ಸ್ವರೂಪ ಹೂವಿನಕೋಲು. ಮಕ್ಕಳ ಮೂಲಕ ಮನೆ ಮನೆಗಳಲ್ಲಿ ಅರಳುವ ಅದ್ಭುತ ಕಲೆ ಹೂವಿನಕೋಲು. ಈ ಹೂವಿನಕೋಲಿಗೆ ಅವಕಾಶ ನೀಡುವುದರ ಮೂಲಕ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ಸಹಕಾರಿಯಾಗುತ್ತದೆ” ಎಂದು ಪ್ರದೀಪ ಕುಮಾರ ಕಲ್ಕೂರ ಅಭಿಪ್ರಾಯಪಟ್ಟರು.
ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಸುಜಯೀಂದ್ರ ಹಂದೆ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ಪೌರಾಣಿಕ ಕಥಾ ಹಂದರದ ಸಣ್ಣ ಭಾಗವನ್ನು ಮಕ್ಕಳು ಹೂವಿನಕೋಲು ರೂಪದಲ್ಲಿ ಪ್ರಸ್ತುತಪಡಿಸಿದರು. ತದನಂತರ ಜನಾರ್ದನ ಹಂದೆಯವರು ಮಂಗಳೂರು ಭಾಗದ 15 ಮನೆಗಳಲ್ಲಿ ಹೂವಿನಕೋಲು ಕಾರ್ಯಕ್ರಮವನ್ನು ನಡೆಸಿದರು.