ಬೆಂಗಳೂರು : ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸಿದ ಕಲಾವಿದ ಜನಾರ್ದನ ರಾವ್ ಹಾವಂಜೆಯವರ ಕಾವಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ‘ಕಾವಿ ಕೆಲಿಡೋಸ್ಕೋಪ್’ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ದಿನಾಂಕ 09 ನವೆಂಬರ್ 2024ರಂದು ಉದ್ಘಾಟನೆಗೊಂಡಿತು.
ಈ ಕಲಾ ಪ್ರದರ್ಶನವನ್ನು ಉದ್ಘಾಟನೆಗೊಳಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ.ಸ. ಕುಮಾರ್ ಇವರು ಮಾತನಾಡಿ “ದೇಶೀಯ ಪಾರಂಪರಿಕ ಕಾವಿ ಕಲೆಯ ಹೂರಣವನ್ನು ಹಾವಂಜೆಯವರು ಈ ಪ್ರದರ್ಶನದಲ್ಲಿ ಕಲಾ ರಸಿಕರಿಗೆ ಉಣಬಡಿಸಿದ್ದಾರೆ. ಕರ್ನಾಟಕದ ಕರಾವಳಿಯ ಭಾಗದ ಈ ಅನೂಹ್ಯಕಲೆಯನ್ನು ಕನ್ನಡಿಗರಾದ ನಾವು ಉಳಿಸಿ ಬೆಳೆಸಬೇಕಾದುದು ನಮ್ಮ ಕರ್ತವ್ಯ. ಈ ಕಲೆಗೆ ಆದಷ್ಟು ಶೀಘ್ರದಲ್ಲಿ ಕರ್ನಾಟಕಕ್ಕೆ ಜಿ.ಐ. ಟ್ಯಾಗ್ ದೊರಕಲಿ. ಅಕಾಡೆಮಿಯಿಂದ ಈ ಕಲೆಯ ಬೆಳೆಸುವಿಕೆಗಾಗಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.” ಎಂಬುದಾಗಿ ತಿಳಿಸಿದರು.
ಹಿರಿಯ ಕಲಾವಿದರಾದ ಗುರುದಾಸ್ ಶೆಣೈ “ಅಧ್ಯಯನಶೀಲ ಸಮಕಾಲೀನ ಕಲಾವಿದನೋರ್ವನ ಕೈಯಲ್ಲಿ ಪ್ರಾಂತೀಯ ಕಲೆಯೊಂದು ದೊರೆತಾಗ ಅದು ಹೊರಹೊಮ್ಮಿಸುವ ರೂಪಗಳಿಗೆ ಈ ಕಲಾಪ್ರದರ್ಶನವೇ ಸಾಕ್ಷಿ” ಎಂಬುದಾಗಿ ಅಭಿಪ್ರಾಯವಿತ್ತರು.
ಅತಿಥಿಗಳಾದ ಲಹರಿ ಗ್ರೂಪ್‌ನ ರೂಪಾ ಹರಿಪ್ರಸಾದ್, ಹಲವು ಹಿರಿಯ ಕಲಾವಿದರು, ಆರ್ಕಿಟೆಕ್ಟ್ಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಲಾವಿದ ಡಾ. ಜನಾರ್ದನ ಹಾವಂಜೆ ಕಟ್ಟಡಗಳ ಮೇಲೆ ಕೆಮ್ಮಣ್ಣಿನ ಮೇಲೆ ಗೀರಿರಚಿಸಲಾಗುವ ಈ ಅಳಿವಿನಂಚಿನ ಪುರಾತನ ಕಲೆಯ ಬಗೆಗೆ ವಿವರಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಹಾಗೂ ಜನಪದೀಯ ಲಕ್ಷಣಗಳುಳ್ಳ ಕಾವಿ ಕಲಾಪ್ರದರ್ಶನವು ದಿನಾಂಕ 17 ನವೆಂಬರ್ 2024ರವರೆಗೆ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಕಲಾ ಸಹೃದಯರಿಗೆ ತೆರೆದಿರುತ್ತದೆ.