ಬೈಂದೂರು : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಮತ್ತು ಯಕ್ಷ ಗುರುಕುಲ ಬೈಂದೂರು ಇವರ ಸಹಭಾಗಿತ್ವದಲ್ಲಿ ಬೈಂದೂರಿನಲ್ಲಿ ನಾಲ್ಕು ಪ್ರೌಢಶಾಲೆಗಳ ‘ಕಿಶೋರ ಯಕ್ಷಗಾನ ಸಂಭ್ರಮ’ವು ದಿನಾಂಕ 30 ಡಿಸೆಂಬರ್ 2024ರಂದು ಉದ್ಘಾಟನೆಗೊಂಡಿತು.
ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಹಿರಿಯ ಯಕ್ಷಗಾನ ಕಲಾವಿದರಾದ ಸಂಜೀವ ಗಾಣಿಗರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ಉದ್ಯಮಿಗಳಾದ ದಯಾನಂದ ಬಾಸ್ ಬೈಲ್, ದೀನಪಾಲ ಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಭಾಸ್ಕರ್ ದೇವಾಡಿಗ, ಸುರೇಶ ಬಚವಾಡಿ, ಯಕ್ಷಗಾನ ಕಲಾರಂಗದ ನಾರಾಯಣ ಎಂ. ಹೆಗಡೆ, ಹೆಚ್.ಎನ್. ಶೃಂಗೇಶ್ವರ, ಗಣೇಶ್ ಬ್ರಹ್ಮಾವರ ಭಾಗವಹಿಸಿದ್ದರು.
ಬೈಂದೂರಿನ ಯಕ್ಷಗುರುಕುಲದ ಸಂಚಾಲಕರಾದ ಸುನೀಲ್ ಹೊಲಾಡು ಸ್ವಾಗತಿಸಿದ ಕಾರ್ಯಕ್ರಮವನ್ನು ಶಿಕ್ಷಕರಾದ ಸುಧಾಕರ್ ಪಿ. ನಿರ್ವಹಿಸಿದರು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಾಸಕರನ್ನು ಅಭಿನಂದಿಸಿದರು. ಬಳಿಕ ಸರಕಾರಿ ಪ್ರೌಢಶಾಲೆ, ಕಂಬದಕೋಣೆ ಇಲ್ಲಿನ ವಿದ್ಯಾರ್ಥಿಗಳಿಂದ, ಹೆಮ್ಮಾಡಿ ಪ್ರಭಾಕರ್ ಆಚಾರ್ಯ ನಿರ್ದೇಶನದಲ್ಲಿ ‘ದ್ರೌಪದಿ ಪ್ರತಾಪ’ ಮತ್ತು ಸರ್ಕಾರಿ ಪ್ರೌಢಶಾಲೆ ಉಪ್ಪುಂದ ಇಲ್ಲಿನ ವಿದ್ಯಾರ್ಥಿಗಳಿಂದ ಶ್ರೀಧರ ಗಾಣಿಗ ಇವರ ನಿರ್ದೇಶನದಲ್ಲಿ ‘ಮೀನಾಕ್ಷಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು.