ಹಿರಿಯಡಕ : ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಆಯೋಜಿಸುತ್ತಿರುವ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಪ್ರಯುಕ್ತ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ, ಕಾಪು ವಿಧಾನ ಸಭಾ ವ್ಯಾಪ್ತಿಯ ಮೂರು ಶಾಲೆಗಳ ಪ್ರದರ್ಶನವು ದಿನಾಂಕ 18 ಡಿಸೆಂಬರ್ 2024ರಂದು ಹಿರಿಯಡಕದ ಶ್ರೀ ವೀರಭದ್ರ ದೇವಳದ ವಠಾರದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಬಹು ಮೇಳಗಳ ಯಜಮಾನರಾದ ಪಿ. ಕಿಶನ್ ಹೆಗ್ಡೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಉದ್ಯಮಿ ನಟರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಪೋಷಕ ಶ್ರೀನಿವಾಸ ರಾವ್, ಪ್ರಾಯೋಜಕರಾದ ವೈದಿಕ ಸ್ಕಂದಗಂಪು ಸುಬ್ರಹ್ಮಣ್ಯ ಆಚಾರ್ಯ ಮತ್ತು ಸೆಲ್ಕೊ ಇದರ ಸುಬ್ರಹ್ಮಣ್ಯರು ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಯು.ಎಸ್. ರಾಜಗೋಪಾಲ ಆಚಾರ್ಯ, ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು. ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ಥ ವಿ.ಜಿ. ಶೆಟ್ಟಿ ಸ್ವಾಗತಿಸಿ, ಎಚ್.ಎನ್. ವೆಂಕಟೇಶ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಅನಂತರ ಯು.ಎಸ್. ನಾಯಕ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಸುರೇಶ ಮರ್ಣೆ ನಿರ್ದೇಶನದಲ್ಲಿ ‘ಕಂಸ ದಿಗ್ವಿಜಯ’ ಮತ್ತು ಪಟ್ಲದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಸುಬ್ರಹ್ಮಣ್ಯ ಪ್ರಸಾದ ಮುದ್ರಾಡಿ ನಿರ್ದೇಶನದಲ್ಲಿ ‘ವೀರಮಣಿ ಕಾಳಗ’ ಪ್ರಸಂಗಗಳು ಪ್ರದರ್ಶನಗೊಂಡವು.