ಬೇಳೂರು : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ‘ಸಿನ್ಸ್ 1999 ಶ್ವೇತಯಾನ-61’ರ ಕಾರ್ಯಕ್ರಮದಡಿಯಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ಸಹಕಾರದೊಂದಿಗೆ ‘ಶಾಲೆಗಳಲ್ಲಿ ಒಡ್ಡೋಲಗ’ ಎಂಬ ಕಾರ್ಯಕ್ರಮವು ದಿನಾಂಕ 18 ಸೆಪ್ಟೆಂಬರ್ 2024ರಂದು ಬೇಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ಪ್ರದೀಪ ವಿ. ಸಾಮಗ ಇವರು ಮಾತನಾಡಿ “ಯಕ್ಷಗಾನದಲ್ಲಿ ಬೆಳಕಿಗೆ ಬಹಳ ಮಹತ್ವ ಇದೆ. ರಾತ್ರಿ ಕೋಡಂಗಿ ತಂದ ಬೆಳಕು ರಂಗದಲ್ಲಿ ಪ್ರತಿಷ್ಟಾಪಿಸಿದರೆ, ಬೆಳಿಗ್ಗೆ ಮಂಗಳ ಆಗುವವರೆಗೆ ಆರುವ ಹಾಗಿರಲಿಲ್ಲ. ಯಕ್ಷಗಾನಕ್ಕೂ ಬೆಳಕಿಗೂ ಅನ್ಯೋನ್ಯ ಸಂಬಂಧವಿದೆ. ಹಾಗಾಗಿ ಯಕ್ಷಗಾನಕ್ಕೆ ಬೆಳಕಿನ ಸೇವೆ ಅಂತಲೇ ಹೆಸರು. ಬೆಳಕು ಅಂದರೆ ಜ್ಞಾನ. ಈ ಜ್ಞಾನ ಪ್ರಸಾರದಲ್ಲಿ ತನ್ನದ್ದಾದಂತಹ ಯೋಗದಾನವನ್ನು ಕೊಡುತ್ತಾ ಬಂದದ್ದು ಯಕ್ಷಗಾನ. ಹಾಡು, ನೃತ್ಯ, ಅಭಿನಯ, ಮಾತು, ಪೌರಾಣಿಕ ಪ್ರಜ್ಞೆ, ಸಾಹಿತ್ಯ ಜ್ಞಾನ, ಭಾಷಾ ಸ್ವಾತಂತ್ರ್ಯ ಎಲ್ಲವನ್ನೂ ಒಳಗೊಂಡ ಸಮೃದ್ಧ ಕಲೆ ಯಕ್ಷಗಾನ. ಯಕ್ಷಗಾನಕ್ಕೆ ಬರುವ ಯುವ ಕಲಾವಿದರಿಗೆ ಆಸಕ್ತಿ ಬಹಳ ಇದೆ. ಆದರೆ ಅದರ ಬಗೆಗಿನ ಜ್ಞಾನದ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಈ ತರದ ಸಾಂಸ್ಕೃತಿಕ ಸಂಸ್ಕಾರ ಕೊಡುವುದು ಕರ್ತವ್ಯವೂ ಹೌದು. ಶಾಲೆ ಶಾಲೆಗಳಿಗೆ ಹೋಗಿ ಯಕ್ಷಗಾನದ ಪಾರಂಪರಿಕ ವಿನ್ಯಾಸವನ್ನು ಇಂತಹ ಕಾರ್ಯಕ್ರಮದ ಮೂಲಕ ಪ್ರಚುರಪಡಿಸಿ, ಸಣ್ಣ ಸಣ್ಣ ಮಕ್ಕಳಲ್ಲಿ ಯಕ್ಷಗಾನದ ಬಗೆಗಿನ ಶುದ್ಧ ಚಿತ್ರಣವನ್ನು ಮೂಡಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ” ಎಂದು ನುಡಿದರು.
ರೋಟರಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಮಾತನ್ನಾಡಿ “ಸರಕಾರಿ ಶಾಲಾ ಮಕ್ಕಳಿಗೆ ಇಂತಹ ಕಾರ್ಯಕ್ರಮ ಲಭ್ಯವಾಗಬೇಕು. ಸರಕಾರಿ ಶಾಲೆ ಮುಖ್ಯ ವಾಹಿನಿಗೆ ಬರಬೇಕು. ಶಾಲಾ ಮಕ್ಕಳಿಗೆ ಇಂತಹ ಪರಂಪರೆಯ ಅರಿವು ಮೂಡಿದರೆ ಕಲೆ ಉಳಿಯುತ್ತದೆ, ಬೆಳೆಯುತ್ತದೆ” ಎಂದರು. ಮುಖ್ಯ ಶಿಕ್ಷಕಿ ಶಾಲಿನಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ, ಸಮತಿಯ ಸದಸ್ಯ ರವಿ ಶೆಟ್ಟಿ, ರೊ. ಸುರೇಶ್ ಬೇಳೂರು, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ರೊ. ವಿಜಯ ಕುಮಾರ್ ಶೆಟ್ಟಿ ಕೊಯಿಕೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಶಾಲೆಗಳಲ್ಲಿ ಒಡ್ಡೋಲಗ’ ಯಶಸ್ವೀ ಕಲಾವೃಂದದವರಿಂದ ರಂಗ ಪ್ರಸ್ತುತಿಗೊಂಡಿತು.