ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಆಯೋಜಿಸಿರುವ ‘ರಾಗ ಸುಧಾರಸ -2025’ ಸಂಗೀತ ಮತ್ತು ನೃತ್ಯ ಉತ್ಸವ ಕಾರ್ಯಕ್ರಮವು ದಿನಾಂಕ 07 ಡಿಸೆಂಬರ್ 2025ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶರವು ಶ್ರೀ ಮಹಾ ಗಣಪತಿ ದೇವಸ್ಥಾನದ ಆಡಳಿತ ಟ್ರಸ್ಟಿ ಶರವು ರಾಘವೇಂದ್ರ ಶಾಸ್ತ್ರಿಯವರು “ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹಾಗೂ ಯುವ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಲಭ್ಯವಾಗುತ್ತಿದೆ. ಸಂಗೀತ ಕಾರ್ಯಾಗಾರಗಳ ಸಂಘಟನೆ ಮತ್ತು ಸಾಮಾಜಿಕ ಮಾಧ್ಯಮದ ಸಮರ್ಥ ಹಾಗೂ ಪರಿಣಾಮಕಾರಿ ಬಳಕೆಯಿಂದ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.)ಯು ಕರ್ನಾಟಕ ಶಾಸ್ತ್ರೀಯ ಕಲಾವಿದರನ್ನು ವಿಶಿಷ್ಟ ರೀತಿಯಲ್ಲಿ ಬೆಂಬಲಿಸುತ್ತಾ ಬಂದಿದೆ” ಎಂದು ನುಡಿದರು.

ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಕರ್ಮಯೋಗಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಶಾಸ್ತ್ರೀಯ ಸಂಗೀತ ಕಲಾವಿದರನ್ನು ಹಾಗೂ ಕಲಾ ಸಂಸ್ಥೆ ಗಳನ್ನು ನಿರಂತರವಾಗಿ ಸಮಾಜ ಪ್ರೋತ್ಸಾಹಿಸಬೇಕು” ಎಂದರು. ಮಂಗಳೂರಿನ ಸನಾತನ ನಾಟ್ಯಾಲಯ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಮಾತನಾಡಿ “ಅತ್ಯಂತ ಶಿಸ್ತು ಬದ್ಧವಾಗಿ ಕಲಾಸಕ್ತಿಯಿಂದ ಸಂಗೀತ ಉತ್ಸವವನ್ನು ವಿಭಿನ್ನವಾಗಿ ಮಣಿ ಕೃಷ್ಣಸ್ವಾಮಿ ಅಕಾಡೆಮಿ ನಡೆಸುತ್ತಾ ಬರುತ್ತಿದೆ” ಎಂದು ನುಡಿದರು.
ಆಕಾಶವಾಣಿಯಿಂದ ನೇರವಾಗಿ ಎ ಗ್ರೇಡ್ ಮಾನ್ಯತೆಯ ವಿಶಿಷ್ಟ ಸಾಧನೆ ಮಾಡಿರುವ ಉಡುಪಿಯ ಲತಾಂಗಿ ಸಹೋದರಿಯರೆಂದು ಪ್ರಖ್ಯಾತರಾಗಿರುವ ಅರ್ಚನಾ ಮತ್ತು ಸಮನ್ವಿಯರನ್ನು ಸಂಮಾನಿಸಲಾಯಿತು. ಅರ್ಚನಾ ಹಾಗೂ ಸಮನ್ವಿ ಮಾತನಾಡಿ “ಮಣಿ ಕೃಷ್ಣಸ್ವಾಮಿ ಅಕಾಡೆಮಿಯು ನಮ್ಮೆಲ್ಲ ಸಾಧನೆಗಳನ್ನು ಗುರುತಿಸಿದೆ ಮತ್ತು ವಿಶಿಷ್ಟ ಪ್ರಯೋಗಗಳಿಗೆ ವೇದಿಕೆ ಕಲ್ಪಿಸಿದೆ” ಎಂದರು.

ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ಪ್ರಾಸ್ತವಿಕ ನುಡಿಗಳನ್ನಾಡಿದರು. ಕೃಷ್ಣಮೂರ್ತಿ ವಂದಿಸಿ, ರಾಗ ಸುಧಾರಸ – 2025ರ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಶ್ರೀಧರ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಅಧ್ಯಕ್ಷ ಗಣೇಶ ಕಾರ್ಣಿಕ್, ಸಲಹಾ ಸಮಿತಿ ಸದಸ್ಯರಾದ ಡಾ. ವಿ. ಅರವಿಂದ ಹೆಬ್ಬಾರ್, ವಿದ್ವಾನ್ ನಾಗೇಶ್ ಎ. ಬಪ್ಪನಾಡು, ವಿದುಷಿ ಗೀತಾ ಸರಳಾಯ, ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಉಪಸ್ಥಿತರಿದ್ದರು.
ಶ್ರೀವರಧಾ ಪಟ್ಟಾಜೆ ಕಾಸರಗೋಡು ಮತ್ತು ಸುಮನ ಕೆ. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಸಿಕೊಟ್ಟರು. ತನ್ಮಯಿ ಉಪ್ಪಂಗಳ ಪುತ್ತೂರು ವಯಲಿನ್ ನಲ್ಲಿ ಮತ್ತು ಕೃಷ್ಣ ಪವನ್ ಕುಮಾರ್ ಮೃದಂಗದಲ್ಲಿ ಸಹಕರಿಸಿದರು. ಅರ್ಚನಾ ಮತ್ತು ಸಮನ್ವಿ ಉಡುಪಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಿತು. ಅನಿರುದ್ಧ ಭಾರಧ್ವಜ್ ವಯಲಿನ್ ಹಾಗೂ ಅನಿರುದ್ಧ ಎಸ್. ಭಟ್, ಬೆಂಗಳೂರು ಮೃದಂಗದಲ್ಲಿ ಸಹಕರಿಸಿದರು.
