ಬೈಂದೂರು : ಶಾರದಾ ವೇದಿಕೆಯಲ್ಲಿ ಸುರಭಿ (ರಿ.) ಬೈಂದೂರು ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ 25ರ ರಜತಯಾನ ಚಾಲನೆ ಹಾಗೂ ಲಾಂಛನ ಅನಾವರಣವು ದಿನಾಂಕ 14 ಸೆಪ್ಟೆಂಬರ್ 2024ರಂದು ನಡೆಯತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ. ಜಯಪ್ರಕಾಶ್ ಮಾವಿನಕುಳಿ ಇವರು ಮಾತನಾಡಿ “ಮರೆಯುವ-ಮೆರೆಯುವ ಇಂದಿನ ಕಾಲಘಟ್ಟದಲ್ಲಿ ಉದಾತ್ತವಾಗಿ ಚಿಂತನೆ ಮಾಡುವ ಮನಸ್ಸುಗಳು ಬೇಕಾಗಿವೆ. ಮಕ್ಕಳಿಗೆ ನಿಜವಾಗಿಯೂ ಅಗತ್ಯವಿರುವ ಪ್ರೀತಿ, ವಿಶ್ವಾಸ, ವಿಶಾಲ ಮನೋಭಾವವನ್ನು ತುಂಬಲು ಮರೆತಿರುವ ನಾವುಗಳು ಪರಸ್ಪರ ನಂಬಿಕೆಯನ್ನು ಕಳೆದುಕೊಂಡು ಯಾಂತ್ರಿಕ ಜಗತ್ತಿನ ದಾಸರಾಗಿ ಬದುಕುತ್ತಿರುವುದು ವಿಪರ್ಯಾಸ. ಧಾವಂತದ ಬದುಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಹಿಂದಿಕ್ಕಿ ಹೋಗುತ್ತಿದ್ದೇವೆ. ಆಧುನಿಕ ಬದುಕಿನ ಅಗತ್ಯತೆಗಳ ನಡುವೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕು ಸುಂದರವಾಗುತ್ತದೆ. ಸಾಹಿತಿ, ಕಲಾವಿದರು, ಚಿಂತಕರಿಂದ ಊರಿಗೆ ಘನತೆ ಹೆಚ್ಚುತ್ತದೆಯೇ ಹೊರತು ಹಣವಂತರಿಂದ ಅಲ್ಲ ಎಂಬುದನ್ನು ಮರೆಯಬಾರದು” ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಇವರು ಸುರಭಿ ರಜತಯಾನಕ್ಕೆ ಚಾಲನೆ ನೀಡಿ ಮಾತನಾಡಿ “ಸುರಭಿ ಸಂಸ್ಥೆ 25 ವರ್ಷಗಳನ್ನು ಪೂರೈಸುವುದರ ಜೊತೆಗೆ ದೇಶಿ ಚಿಂತನೆ ಹಾಗೂ ಪ್ರಾದೇಶಿಕತೆಗೆ ಚೈತನ್ಯ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸಾಂಸ್ಕೃತಿಕ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡ ಸಂಸ್ಥೆಯ ತನ್ನ ಕಾರ್ಯಗಳ ಮೂಲಕ ಇನ್ನಷ್ಟು ಎತ್ತರಕ್ಕೇರಲಿ” ಎಂದರು.
ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುಜಯೀಂದ್ರ ಹಂದೆ ಆಶಯ ನುಡಿಗಳನ್ನಾಡಿದರು. ರಂಗಸಂಸ್ಕೃತಿ ಕಾರ್ಕಳದ ಅಧ್ಯಕ್ಷ ನಿತ್ಯಾನಂದ ಪೈ ಅತಿಥಿಗಳಾಗಿದ್ದರು. ಸುರಭಿ ನಿರ್ದೇಶಕ ಗಣಪತಿ ಹೋಬಳಿದಾರ್, ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು.